ನವದೆಹಲಿ, ಡಿಸೆಂಬರ್ 29: ಸಾರ್ವಜನಿಕರು ಪೊಲೀಸ್ ಠಾಣೆ ಯಲ್ಲಿ ನೀಡುವ ದೂರುಗಳನ್ನೇ ಇನ್ನು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಎಂದು ಪರಿಗಣಿಸಲಾಗುತ್ತದೆ.
ಇಂತಹದ್ದೊಂದು ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಮುಂದಿನ ವಾರ ಸುತ್ತೋಲೆ ಹೊರಡಿಸಲಿದ್ದು, ಇನ್ನು ಕಡ್ಡಾಯವಾಗಿ ಇದನ್ನು ಜಾರಿಗೆ ತರಬೇಕೆಂದು ಎಲ್ಲಾ ಠಾಣೆ ಮುಖ್ಯಸ್ಥರಿಗೆ ನಿರ್ದೇ ಶಿಸುವಂತೆ ಸೂಚನೆ ನೀಡಲಿದೆ. ಜತೆಗೆ ಅಪರಾಧಿ ಅಧಿಕಾರಿಗಳು ಪಡೆದಿದ್ದ ಪ್ರಶಸ್ತಿ,ಪದಕಗಳನ್ನು ಹಿಂಪಡೆಯಲೂ ನಿರ್ಧರಿಸಿದೆ.ಸಾರ್ವಜನಿಕರ ದೂರು ಇನ್ನು ಎಫ್‌ಐಆರ್ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುವ ಪೊಲೀಸರು ಮತ್ತು ದೂರು ದಾಖಲಿಸಿಕೊಳ್ಳಲು ಹಿಂದೆ ಮುಂದೆ ನೋಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ನಿರಂತರ ದೂರು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದೆ. ಸಾರ್ವಜನಿಕರು ಸುಳ್ಳು ದೂರುಗಳನ್ನು ನೀಡಿದರೆ ಎಫ್‌ಐಆರ್ ದಾಖಲಿಸಿದ ನಂತರವಷ್ಟೇ ಅವುಗಳ ಅಸಲತ್ತಿನ ಬಗ್ಗೆ ತನಿಖೆ ನಡೆಸಬೇಕೆಂದು ಹೇಳಿರುವ ಸಚಿವಾಲಯ, ಎಫ್‌ಐಆರ್ ದಾಖಲಿಸುವುದನ್ನು ಮಾತ್ರ ಕಡ್ಡಾಯಗೊಳಿಸಬೇಕೆಂದು ಹೇಳಿದೆ. ತನಿಖೆ ನಂತರ ದೂರು ಸುಳ್ಳು ಎಂದು ಸಾಬೀತಾದರೆ ಎಫ್‌ಐಆರ್ ಅನ್ನು ರದ್ದುಪಡಿಸಲು ಅವಕಾಶ ಇದೆ ಎಂದೂ ಹೇಳಿದೆ.
ರುಚಿಕಾ ಪ್ರಕರಣದ ಪರಿಣಾಮ:ಅಲ್ಲದೇ, ದೇಶದಲ್ಲಿ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಹರ್ಯಾಣದ ಮಾಜಿ ಪೊಲೀಸ್ ಮಹಾನಿರ್ದೇಶಕ ಪಿ.ಎಸ್. ರಾವತ್ ಅವರಿಂದ ಅನುಭವಿಸಿದ ಲೈಂಗಿಕ ಕಿರುಕುಳದಿಂದ ರುಚಿಕಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ಕೇಂದ್ರದ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರುಚಿಕಾ ಪೋಷಕರು ರಾವತ್ ವಿರುದ್ಧ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಅಲ್ಲದೇ ಸುಳ್ಳು ಆರೋಪದ ಮೇಲೆ ರುಚಿಕಾ ಸಹೋದರನಿಗೆ ಕಿರುಕುಳ ನೀಡಿದ ಪೊಲೀಸರ ವಿರುದ್ಧವೂ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಇದು ದೇಶಾದ್ಯಂತ ತೀವ್ರ ವಿವಾದಕ್ಕೆ ಮತ್ತು ಸಾರ್ವಜನಿಕ ಟೀಕೆಗೆ ಗುರಿಯಾಗಿತ್ತು.
ಸೌಜನ್ಯ: ಕನ್ನಡಪ್ರಭ