ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ನೆರೆ ಸಂತ್ರಸ್ತರಿಗೆ 50 ಸಾವಿರ ಮನೆ: ನೆದರ್‌ಲ್ಯಾಂಡ್ ಸಂಸ್ಥೆಯೊಂದಿಗೆ ಒಪ್ಪಂದ

ಬೆಂಗಳೂರು:ನೆರೆ ಸಂತ್ರಸ್ತರಿಗೆ 50 ಸಾವಿರ ಮನೆ: ನೆದರ್‌ಲ್ಯಾಂಡ್ ಸಂಸ್ಥೆಯೊಂದಿಗೆ ಒಪ್ಪಂದ

Sun, 22 Nov 2009 03:04:00  Office Staff   S.O. News Service
ಬೆಂಗಳೂರು, ನ.21: ನೆರೆ ಪೀಡಿತ ಪ್ರದೇಶಗಳಲ್ಲಿ 50 ಸಾವಿರ ಮನೆಗಳನ್ನು ನಿರ್ಮಿಸಿಕೊಡಲು ನೆದರ್‌ಲ್ಯಾಂಡ್ ಮೂಲದ ಸಿಯಾನ್ ಹೋಲ್ಡಿಂಗ್ ಗ್ರೂಪ್ ರಾಜ್ಯ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಸಮ್ಮುಖದಲ್ಲಿ ಸಂಸ್ಥೆಯ ಮುಖ್ಯಸ್ಥ ಬಿಡಿಯಾಧರ್ ಜಾ ಜೈರಾಂ ಮತ್ತು ವಸತಿ ಇಲಾಖೆಯ ಕಾರ್ಯದರ್ಶಿ ಕೊಂಗವಾಡ್ ಪರಸ್ಪರ ಒಪ್ಪಂದಕ್ಕೆ ಸಹಿಹಾಕಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನೆರೆ ಸಂತ್ರಸ್ಥ ಪ್ರದೇಶಗಳಲ್ಲಿ ಸುಮಾರು ೭೫ ಸಾವಿರ ಮನೆಗಳನ್ನು ನಿರ್ಮಿಸಿಕೊಡಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದಿವೆ. ದೇಶದಲ್ಲಷ್ಟೆ ಅಲ್ಲದೆ ವಿದೇಶಿ ಮೂಲದ ಸಂಸ್ಥೆಗಳು ಮತ್ತು ಅನಿವಾಸಿ ಭಾರತೀಯರು ಮುಂದೆ ಬಂದಿದ್ದಾರೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ ಭಾಗದ ೩೭೩ ಗ್ರಾಮಗಳು ಮುಳುಗಡೆಯಾಗಿವೆ, ೨೦೯ ಗ್ರಾಮಗಳು ಸಂಪೂರ್ಣವಾಗಿ ಸ್ಥಳಾಂತರಿಸಬೇಕಿದೆ. ೧೬೪ ಭಾಗಶಃ ಸ್ಥಳಾಂತರಿಸಬೇಕಿದೆ. ಒಟ್ಟು ೬.೫ ಲಕ್ಷ ಕುಟುಂಬಗಳು ಸ್ಥಳಾಂತರಗೊಳ್ಳಲಿವೆ. ಮನೆ ನಿರ್ಮಾಣಕ್ಕೆ ಒಂದುವರೆ ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ದಾನಿಗಳು ಒಂದು ಲಕ್ಷ ರೂಪಾಯಿ ನೀಡಲಿದ್ದಾರೆ. ಉಳಿದ ೫೦ ಸಾವಿರ ರೂಪಾಯಿಗಳನ್ನು ಸರಕಾರ ಪಾವತಿಸಲಿದೆ ಎಂದು ಅವರು ಹೇಳಿದರು.

ಚಳಿಗಾಲದ ಅಧಿವೇಶನ ಆರಂಭಗೊಳ್ಳುವ ವೇಳೆಗೆ ಪುನರ್ವಸತಿ ಕಾರ್ಯಗಳನ್ನು ಒಂದು ಹದಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.

ಕೇಂದ್ರದಿಂದ ಅನುದಾನ: ನೆರೆ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿಗಾಗಿ ರಾಜ್ಯ ಸರಕಾರ ೧೫೭೯ ಕೋಟಿ ರೂಪಾಯಿ ಬಿಡುಗಡೆ ಮಾಡಿ, ೧೧೩೨ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಭೂಮಿ ಖರೀದಿಗಾಗಿಯೇ ೭೫ ಕೋಟಿ ರೂಪಾಯಿ ಬಿಡಗಡೆ ಮಾಡಲಾಗಿದೆ. ಅಗತ್ಯವಿರುವ ಇನ್ನು ೭೫ ಕೋಟಿ ರೂಪಾಯಿಗಳನ್ನು ಒಂದೆರಡು ದಿನಗಳನ್ನು ಬಿಡುಗಡೆ ಮಾಡಲಾಗುವುದು. ಈಗಾಗಲೇ ೧೬೩ ಗ್ರಾಮಗಳಿಗೆ ಭೂಮಿ ಖರೀದಿಸಿ ಸರಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿಯವರು ಘೋಷಿಸಿರುವ ಒಂದು ಸಾವಿರ ಕೋಟಿ ರೂಪಾಯಿ ತಾತ್ಕಾಲಿಕ ಪರಿಹಾರಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಅನುದಾನವೂ ಸೇರಿದಂತೆ ಈವರೆಗೆ ಕೇಂದ್ರ ಸರಕಾರ ೮೩೯ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ನೆರವಿಗೆ ಶೀಘ್ರವೇ ಪ್ರಧಾನ ಮಂತ್ರಿಯವನ್ನು ಭೇಟಿ ಮಾಡುತ್ತೇನೆ. ಈ ನಿಟ್ಟಿನಲ್ಲಿ ಈವರೆಗೆ ನಡೆಸಿರುವ ತಮ್ಮ ಪ್ರಯತ್ನ ಫಲ ನೀಡಿಲ್ಲ ಎಂದು ಯಡಿಯೂರಪ್ಪ ಹೇಳಿದರು

Share: