ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:`ರೈತರ ಸಾಲ ಮನ್ನಾ ಮಾಡುವುದಿಲ್ಲ ..ಓಟಿಗಾಗಿ ಸುಳ್ಳು ಭರವಸೆ ಕೊಟ್ಟೆ'

ಬೆಂಗಳೂರು:`ರೈತರ ಸಾಲ ಮನ್ನಾ ಮಾಡುವುದಿಲ್ಲ ..ಓಟಿಗಾಗಿ ಸುಳ್ಳು ಭರವಸೆ ಕೊಟ್ಟೆ'

Mon, 11 Jan 2010 18:55:00  Office Staff   S.O. News Service

ಬಿಜೆಪಿಯಿಂದ ದಲಿತರಿಗೆ ಅನ್ಯಾಯ

`ಭಾರತೀಯ ಜನತಾ ಪಕ್ಷ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಇದು ಮುಂದುವರೆದರೆ ಬಿಜೆಪಿಯ ದಲಿತ ಶಾಸಕರೆಲ್ಲ ಬಂಡೇಳುವ ಸಾಧ್ಯತೆ ಇದೆ. ದಲಿತರ ಸ್ವಾಭಿಮಾನ ಪರೀಕ್ಷಿಸಬಾರದು. ಅನ್ಯಾಯ ಇದೇ ರೀತಿ ಮುಂದುವರೆದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಇತ್ತೀಚಿಗಷ್ಟೇ ರಚಿತವಾದ ಬಿಜೆಪಿ ರಾಜ್ಯ ಸಮನ್ವಯ ಸಮಿತಿಯಲ್ಲಿ ದಲಿತ ನಾಯಕರಿಗೆ ಸ್ಥಾನ ನೀಡಿಲ್ಲ. ಮತ ಬೇಕಾದಾಗ ನೆನಪಾಗುವ ದಲಿತರು ಅಧಿಕಾರ ನೀಡುವಾಗ ಮಾತ್ರ ಬೇಡವೇ?
-ಹೀಗೆಂದವರು ಯಾರು ಗೊತ್ತೆ ಬಿಜೆಪಿಯ ಸಂಸದ ರಮೇಶ್ ಜಿಗಜಿಣಗಿ. ಬಿಜೆಪಿ ಸಂಸದರೇ ಎಲ್ಲಾ ಬಿಡಿಸಿ ಹೇಳಿದ ಮೇಲೆ ನಾವಾದರೂ ಏನು ಹೇಳುವುದಿದೆ. ಎಲ್ಲವೂ ಮುಕ್ತ ಮುಕ್ತವಾಗಿ ಬಯಲಾಗಿದೆಯಲ್ಲಾ. ಬಿಜೆಪಿಯ ದಲಿತ ವಿರೋಧಿ ಮುಖ.

`ಓಟಿಗಾಗಿ ಸುಳ್ಳು ಭರವಸೆ ಕೊಟ್ಟೆ`

ಚುನಾವಣೆಗಳ ಕಾಲದಲ್ಲಿ ಗೆಲ್ಲಲು ಬೇಕಾದ ಭರವಸೆಗಳ ಮಹಾಪೂರವನ್ನೇ ಹರಿಸುವುದು ಆನಂತರ ಕೊಟ್ಟ ಭರವಸೆಗಳನ್ನು ಮರೆತವರಂತೆ ನಟಿಸುವುದು ಬಂಡವಾಳಶಾಹಿ ರಾಜಕೀಯ ಪಕ್ಷಗಳಲ್ಲಿ `ತೀರಾ ಮಾಮೂಲಿ' ಘಟನಾವಳಿ ಗಳು. ಹೆಚ್ಚೆಂದರೆ ಭರವಸೆ ಯಾಕೆ ಈಡೇರಿಸಲು ಸಾಧ್ಯವಿಲ್ಲ ಅಂತ ನೆಪಗಳನ್ನು ಕೊಡಬಹುದು. ಅಂತಹದ್ದನ್ನು ಧಾರಾಳವಾಗಿ  ಮಾಡಲಾಗುತ್ತದೆ.  ಆದರೆ  ಇಲ್ಲಿ ಮತ್ತೊಂದು ಬಗೆಯ ಉದಾಹರಣೆ ಇದೆ. ಇದನ್ನು `ದಿಟ್ಟ, ನೇರ' -ನಡವಳಿಕೆ ಅನ್ನಬೇಕೋ ಭಂಡತನ ವಂಚನೆ, ಮೋಸ, ದ್ರೋಹ ಅಂತ ಕರೆಯಬೇಕೋ ಜನ ತೀರ್ಮಾನಿಸಬೇಕು.

ಚುನಾವಣೆಯ ಸಂದರ್ಭದಲ್ಲಿ ಭರವಸೆ ಕೊಟ್ಟಂತೆ ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಯಡಿಯೂರಪ್ಪ ವಿಧಾನ ಪರಿಷತ್ತಿನಲ್ಲಿ ಘೋಷಿಸಿದ್ದಾರೆ. ಸಾಲ ಮನ್ನಾ ಭರವಸೆ ನೆನಪು ಮಾಡಿಕೊಟ್ಟ ಪ್ರತಿಪಕ್ಷಗಳ ಮುಖಂಡರ ಮಾತಿಗೆ ಉತ್ತರ ಕೊಡುತ್ತಾ ಮುಖ್ಯಮಂತ್ರಿ ಡಾ: ಬಿ.ಎಸ್.ಯಡಿಯೂರಪ್ಪ ಏನು ಹೇಳಿದ್ದಾರೆ.
``ಚುನಾವಣೆ ಸಂದರ್ಭದಲ್ಲಿ ಓಟಿಗಾಗಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೇನೆ ನಿಜ. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ. ನಾನು, ನೀವು ಚುನಾವಣೆ ಬಂದಾಗ ಈ ರೀತಿಯ ಆಶ್ವಾಸನೆ ನೀಡಿರುತ್ತೇವೆ. ಆದರೆ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ".

`ಸಾಲ ಮನ್ನಾ ಮಾಡಲು ಹಣ ಎಲ್ಲಿಂದ ತರುವುದು'? ಎಂದೂ ಅವರು ಪ್ರಶ್ನಿಸಿದ್ದಾರೆ. ಈ ಬುದ್ಧಿ ಭರವಸೆ ಕೊಡುವಾಗ ಎಲ್ಲಿಗೆ ಹೋಗಿತ್ತು? ಇಂಥ ಭಂಡತನದ ಮಾತುಗಳನ್ನು ಕೇಳಿ  ಯಾವ ಕಾಲಕ್ಕೂ ಜನ ಸುಮ್ಮನೆ ಕುಳಿತಿರುತ್ತಾರೆ ಎಂದು ಯಡಿಯೂರಪ್ಪ ಭಾವಿಸಿದ್ದಾರೋ ಏನೋ. ರಾಜ್ಯದ ಮಾಜಿ ಮುಖ್ಯಮಂತ್ರಿ ಗುಂಡೂರಾಯರಿಗೆ, ಚುನಾವಣೆಯಲ್ಲಿ ಜನ ಯಾವ ಪಾಠ ಕಲಿಸಿದರೂ ಅಂತ ಯಡಿಯೂರಪ್ಪ ಅವರಿಗೆ ಮರೆತಿರಬಹುದೆಂದು ಕಾಣುತ್ತದೆ.

`ಒತ್ತಡಕ್ಕೆ ಮಣಿದು ಸಚಿವ ಸ್ಥಾನ ಕೊಟ್ಟೆ'

``ರಾಜಕಾರಣದಲ್ಲಿ ನಮಗೆ ಇಷ್ಟವಿರಲಿ ಅಥವಾ ಬಿಡಲಿ ಅನಿವಾರ್ಯವಾಗಿ ಕೆಲವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹಲವು ಶಾಸಕರ ಒತ್ತಡಕ್ಕೆ ಮಣಿದು ಹೊನ್ನಾಳಿಯ ಶಾಸಕ ಎಂ.ಸಿ.ರೇಣುಕಾಚಾರ್ಯರವರಿಗೆ ಸಚಿವ ಸ್ಥಾನ ನೀಡಲಾಗಿದೆ."

ಹೌದು ಈ ಮೇಲಿನ ಮಾತನ್ನು ಹೇಳಿರುವವರು ಕೂಡ ಡಾ: ಬಿ.ಎಸ್.ಯಡಿಯೂರಪ್ಪಅವರೇ. ಈ ರಾಜ್ಯದ ಮುಖ್ಯಮಂತ್ರಿಯ ಅವಸ್ಥೆ ಕಂಡು ನಗಬೇಕೋ ಅಳಬೇಕೋ ಗೊಂದಲವಾಗುವಂತಿದೆ. ಈ ಶಾಸಕ ಸಚಿವರಾಗಲೂ ಏನೇನೆಲ್ಲಾ ಅರ್ಹತೆಗಳಿವೆ ಎಂಬುದು ಈಗಾಗಲೇ ರಾಜ್ಯದ ಜನರ ನಡುವೆ ಜನ ಜನಿತವಾದ ಸಮಾಚಾರ. ಇಂಥ ಸಚಿವರು ಹಾಗೂ ಇಂಥ ಸಚಿವರನ್ನು ಕಟ್ಟಿಕೊಂಡ ಮುಖ್ಯಮಂತ್ರಿ ರಾಜ್ಯದ ಜನರ ಸಮಸ್ಯೆಗಳಿಗೆ ಯಾವ ಪರಿಹಾರ ಕೊಟ್ಟಾರು? ಜನತೆಯೇ ಈ ರಾಜ್ಯವನ್ನು ಕಾಪಾಡಬೇಕು.

`ಶಾಸಕರು ಚೆನ್ನಾಗಿ ಆಸ್ತಿ ಮಾಡಿಕೊಂಡಿದ್ದಾರೆ. -ಸರ್ಕಾರದ ಬಗೆಗೆ ಜನರ ನಿರೀಕ್ಷೆ ಹುಸಿಯಾಗಿದೆ.'
- ಅಪ್ಪಚ್ಚು ರಂಜನ್, ಬಿಜೆಪಿ ಶಾಸಕ

ಯಡಿಯೂರಪ್ಪ `ಒತ್ತಡ' ಎಂದು ಕರೆದಿರುವುದನ್ನು ಸಚಿವ ಸಂಪುಟ ಹಿರಿಯ ಸದಸ್ಯ ಆರ್.ಅಶೋಕ್ ಬ್ಲಾಕ್ ಮೇಲ್ ಎಂದು ಕರೆದಿದ್ದಾರೆ.
ಒತ್ತಡ ವೋ ಬ್ಲಾಕ್ ಮೇಲೋ ಅಥವಾ ಈ ಎರಡೂ ಸೇರಿಯೋ ಒಟ್ಟಾರೆ ರೇಣುಕಾಚಾರ್ಯ ಮಂತ್ರಿ ಆಗೇ ಬಿಟ್ಟರು. ಈ ವಿಚಾರದಲ್ಲಿನ ಭಿನ್ನಮತವು ಬಿಜೆಪಿ ಪಕ್ಷದೊಳಗಿನ ಇನ್ನಷ್ಟು ಹೊಲಸನ್ನು ಹೊರಹಾಕಿದೆ. ಈ ಕೆಳಗೆ ಮಡಿಕೇರಿ ಕ್ಷೇತ್ರ ಶಾಸಕ ಬಿಜೆಪಿಯ ಅಪ್ಪಚ್ಚು ರಂಜನ್ ಆಡಿರುವ ಮಾತುಗಳನ್ನು ಕೇಳಿ. ಅವರು ಆಡುತ್ತಿರುವುದು ಬಿಜೆಪಿ ಶಾಸಕರ ಬಗೆಗೆ ಎಂಬುದು ನೆನಪಿರಲಿ.

``ಪಕ್ಷದ ನಿಷ್ಠಾವಂತ ಶಾಸಕರಾದ ನಾವು ಸ್ವಂತಕ್ಕಿಂತ ಹೆಚ್ಚು ಪಕ್ಷಕ್ಕೆ ಖರ್ಚು ಮಾಡಿದ್ದೇವೆ. ಕೆಲವರು ಶಾಸಕರಾದ ನಂತರ ಆಸ್ತಿ ಮಾಡಿದರೆ ನಾವು ಆಸ್ತಿ ಕಳೆದುಕೊಂಡಿದ್ದೇವೆ. ಪಕ್ಷಕ್ಕೆ ಸಕ್ರಿಯವಾಗಿ ದುಡಿದ ಹಾಗೂ ಕೆಲಸ ಮಾಡಲು ಆಸಕ್ತಿ ಇರುವವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಸಚಿವ ಸಂಪುಟದಲ್ಲಿ ಕೆಲಸಕ್ಕೆ ಬಾರದ ಹಾಗೂ ಸಾಮರಸ್ಯ ಇಲ್ಲದವರನ್ನು ಉಳಿಸಿ ಕೊಳ್ಳಲಾಗಿದೆ. ಕೆಲವು ಸಚಿವರಿಗೆ ಸದನದಲ್ಲಿ ಉತ್ತರ ನೀಡುವ ಸಾಮರ್ಥ್ಯವು ಇಲ್ಲ.   ಸಂಪುಟದಲ್ಲಿ ಹಿರಿಯ ಶಾಸಕರನ್ನು ಕಡೆಗಣಿಸುತ್ತಿರುವ ಬಗ್ಗೆ ಸಂಘ ಪರಿವಾರಕ್ಕೂ ದೂರು ನೀಡಲಾಗಿದ್ದು ತಾಳ್ಮೆ ವಹಿಸುವಂತೆ ಆರ್.ಎಸ್.ಎಸ್. ಮುಖಂಡರು ಸಲಹೆ ಮಾಡಿದ್ದಾರೆ" ಎಂದಿರುವ ಶಾಸಕ ಅಪ್ಪಚ್ಚು ರಂಜನ್ ಬಿಜೆಪಿ ಸರ್ಕಾರದ ಬಗ್ಗೆ ಇನ್ನೊಂದು ಸರ್ರ್ಟಿಫಿಕೇಟ್ ನೀಡಿದ್ದಾರೆ. ಇದನ್ನು ರಾಜ್ಯ ಬಿಜೆಪಿ ಸರ್ಕಾರದ ಕುರಿತ ಶ್ವೇತ ಪತ್ರ ಅಂತ ಬೇಕಾದರೂ ಭಾವಿಸಿಕೊಂಡು ಓದಿಕೊಳ್ಳ ಬಹುದು.

``ಆರಂಭದಲ್ಲಿ ಜನ ಬಿಜೆಪಿ ಸರ್ಕಾರ ಒಳ್ಳೆಯ ಆಡಳಿತ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದರು.  ಆದರೆ ಇದೀಗ ಅದೆಲ್ಲವೂ ಹುಸಿಯಾಗಿದೆ". ತಾತ್ಕಾಲಿಕ ತೇಪೆ ಹಾಕಿ ಅಪ್ಪಚ್ಚು ರಂಜನ್ರನ್ನು ಸ್ವಲ್ಪ ಕಾಲ ತಣ್ಣಗಾಗಿಸಲಾಗಿದೆ ಎಂಬುದು ಇತ್ತೀಚಿನ ಸುದ್ದಿಯಷ್ಟೇ.

ಸೌಜನ್ಯ: ಜನಶಕ್ತಿ


 


Share: