ಭಟ್ಕಳ, ಫೆಬ್ರವರಿ ೨೮: ಇಂದು ಪ್ರವಾದಿಯವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕರಾವಳಿಯ ಪಟ್ಟಣಗಳಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲಾಗಿತ್ತು. ಭಟ್ಕಳದಲ್ಲಿ ಪ್ರತಿವರ್ಷ ಬಜ್ಮೆ ಫೈಜುರ್ ರಸೂಲ್ (ಸ) ಸಂಘಟನೆ ಈದ್ ಮಿಲಾದ್ ಮೆರವಣಿಗೆಯನ್ನು ಏರ್ಪಡಿಸುತ್ತಾ ಬಂದಿದ್ದು ಈ ವರ್ಷವೂ ಏರ್ಪಡಿಸಿತ್ತು. ಈ ವರ್ರ್ಷ ಹಿಂದಿನ ವರ್ಷಗಳಿಗೂ ಮಿಗಿಲಾದ ಜನಸಾಗರದಿಂದ ತುಂಬಿ ತುಳುಕುತ್ತಿದ್ದ ಮೆರವಣಿಗೆ ನಯನಮನೋಹರವಾಗಿತ್ತು. ಮಕ್ಕಳು ಹಾಗೂ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಂಜೆಯ ಅಸರ್ ಪ್ರಾರ್ಥನೆಯ ಬಳಿಕ ಈದ್ಗಾ ಮೈದಾನದಿಂದ ಪ್ರಾರಂಭವಾದ ಮೆರವಣಿಗೆ ಶಂಸುದ್ದೀನ್ ವೃತ್ತ, ಮುಖ್ಯ ರಸ್ತೆ, ಸುಲ್ತಾನ್ ರಸ್ತೆ, ಮೊಹಮ್ಮದ್ ಆಲಿ ರಸ್ತೆ ಗಳನ್ನು ಹಾದು ಬಸ್ ನಿಲ್ದಾಣದ ಬಳಿಯ ವೇದಿಕೆಯ ಬಳಿ ಕೊನೆಗೊಂಡಿತು. ಮೆರವಣಿಗೆಯ ವೇಳೆ ಅಲ್ಲಾಹು ಅಕ್ಬರ್ ಎಂಬ ವಾಕ್ಯ ಮೊಳಗುತ್ತಿತ್ತು. ಮೆರವಣಿಗೆಯಲ್ಲಿ ನವಾಯತ್ ಸಮುದಾಯದ ಜನರು ಕಡಿಮೆ ಸಂಖ್ಯೆಯಲ್ಲಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಹಾಜರಿದ್ದರು. ಮೆರವಣಿಗೆಯಲ್ಲಿ ಸಾಂಪ್ರಾದಾಯಿಕ ದಫ್ (ಚರ್ಮವಾದ್ಯ)ದ ಮೂಲಕ ಸಂಗೀತ ನೀಡಲಾಗಿತ್ತು. ಮೆರವಣಿಗೆಯ ವೇಳೆ ಅತ್ಯಂತ ಶಿಸ್ತುಬದ್ದ ನಿಲುವನ್ನು ಪ್ರದರ್ಶಿಸಿದ ಯುವಕರು ಪ್ರಶಂಸೆಗೆ ಪಾತ್ರರಾದರು. ಮುನ್ನೆಚ್ಚರಿಕಾ ಕ್ರಮವಾಗಿ ಪೋಲೀಸ್ ಬಂದೋಬಸ್ತನ್ನೂ ಏರ್ಪಡಿಸಲಾಗಿತ್ತು.





ಬಳಿಕ ಅಹ್ಮದ್ ಸಯೀದ್ ಮಸೀದಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರವಾದಿಯವರ ಜೀವನ ಚರಿತ್ರೆ ಯನ್ನು ಜಮಾತೆ ಇಸ್ಲಾಮಿ ಹಿಂದ್ - ಭಟ್ಕಳ ಶಾಖೆಯ ಸದಸ್ಯರು ಸಾದರಪಡಿಸಿದರು. ಹಲವು ಖ್ಯಾತ ಇಸ್ಲಾಮಿಕ್ ವಿದ್ವಾಂಸರೂ ಪ್ರವಚನ ನೀಡಿದರು. ಮಹಿಳೆಯರಿಗೆ ವಿಶೇಷ ಸ್ಥಳಾವಕಾಶ ಏರ್ಪಡಿಸಲಾಗಿತ್ತು.
ಕರಾವಳಿಯ ಇತರ ನಗರಗಳಲ್ಲಿಯೂ ಇಂದು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರವಾರ, ಕುಮಟಾ, ಅಂಕೋಲಾ, ಹೊನ್ನಾವರ, ದ.ಕ.ಜಿಲ್ಲೆಯ ಶಿರೂರು, ಕುಂದಾಪುರ, ಉಡುಪಿ, ಉಳ್ಳಾಲ, ಮಂಗಳೂರು ಗಳಲ್ಲಿಯೂ ಶಾಂತಿಯುತ ಹಬ್ಬ ಆಚರಿಸಿದ ವರದಿಯಾಗಿದೆ.
ಮುಂಡಗೋಡದಲ್ಲಿ ಘರ್ಷಣೆ: ಮುಂಡಗೋಡದಲ್ಲಿ ಈದ್ ಮಿಲಾದ್ ಮೆರವಣಿಗೆಯ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರು ಗಾಯಗೊಂಡಿರುವ ವರದಿಯಾಗಿದೆ. ಈ ಕುರಿತು ಮುಂಡಗೋಡ ಸಿಪಿಐ ಯವರು ಈ ಘಟನೆ ಮೆರವಣಿಗೆಯ ವೇಳೆ ಒಂದು ಐಸ್ ಕ್ರೀಮ್ ಗಾಡಿ ಆಗಮಿಸಿದ್ದು ಈ ಗಾಡಿ ಮೆರೆವಣಿಗೆಯ ನಡುವೆ ಇರಬೇಕೆಂದು ಹಾಗೂ ಇರಬಾರದೆಂದು ನಡೆದ ವಾಗ್ವಾದ ಘರ್ಷಣೆಗೆ ತಿರುಗಿತು ಎಂದು ಸಾಹಿಲ್ ಪ್ರತಿನಿಧಿಗೆ ತಿಳಿಸಿದ್ದಾರೆ. ಆದರೆ ಪೋಲೀಸರ ಮಧ್ಯಪ್ರವೇಶದಿಂದ ಹೆಚ್ಚಿನ ತೊಂದರೆಯಿಲ್ಲದೇ ಮೆರವಣಿಗೆ ಮುಂದುವರೆದಿದೆ. ಗಾಯಗೊಂಡ ಇಬ್ಬರಲ್ಲಿ ಒಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.




ಶಿರೂರಿನಲ್ಲಿ ಬಸ್ ಚಾಲಕನ ಮೇಲೆ ಹಲ್ಲೆ: ಶಿರೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ವೇಳೆ ಮಾರ್ಕೆಟ್ ಬಳಿ ಅತಿವೇಗದಿಂದ ಧಾವಿಸಿ ಬಂದ ಬಸ್ ಮೆರವಣಿಗೆಯ ಸ್ಥಳಕ್ಕೆ ನುಗ್ಗಿತ್ತು. ಸ್ವಲ್ಪದರಲ್ಲಿಯೇ ಅಪಾಯದಲ್ಲಿ ಜನರು ಪಾರಾದರೂ ಈ ಘಟನೆ ಮೆರವಣಿಗೆಯಲ್ಲಿದ್ದ ಯುವಕರನ್ನು ರೊಚ್ಚಿಗೆಬ್ಬಿಸಿತು. ಕೋಪಾವಿಷ್ಟರಾದ ಕೆಲವು ಯುವಕರು ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಹೊರಗೆಳೆದು ಹಲ್ಲೆ ಪ್ರಾರಂಭಿಸಿದರು. ಆದರೆ ಹಿರಿಯರು ಮಧ್ಯಪ್ರವೇಶಿಸಿ ತಡೆದ ಪರಿಣಾಮವಾಗಿ ಹೆಚ್ಚಿನ ಅನಾಹುತವಾಗುವುದು ತಪ್ಪಿತು. ಈ ಘಟನೆ ನಡೆದ ಕೂಡಲೇ ಕಾರ್ಯತತ್ಪರರಾದ ಪೋಲಿಸರು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದರು. ಬಳಿಕ ಯಾವುದೇ ತೊಂದರೆ ಇಲ್ಲದೇ ಮೆರವಣಿಗೆ ಮುಂದುವರೆಯಿತು.
ಉಡುಪಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯ ಕೆಲವು ದೃಶ್ಯಗಳು
ಮಂಗಳೂರು ಸಮೀಪದ ಉಳ್ಳಾಲದಲ್ಲಿ ಈದ್ ಮಿಲಾದ್ ಸಂಭ್ರಮ
ಚಿತ್ರ, ವರದಿ: ಸಾಹಿಲ್ ವರದಿಗಾರರು.