ಬೆಂಗಳೂರು, ಅಕ್ಟೋಬರ್ 18: ಸರ್ಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳ ಹೊರತಾಗಿಯೂ ವಿದೇಶಗಳಲ್ಲಿ ಭಾರತವನ್ನು ಬಡರಾಷ್ಟ್ರವೆಂದು ಬಣ್ಣಿಸಿ ದೇಣಿಗೆ ಸಂಗ್ರಹಿಸುತ್ತಿರುವ ಇಸ್ಕಾನ್ ಸಂಸ್ಥೆಯ ವಿರುದ್ಧದ ಆರೋಪದ ತನಿಖೆಗೆ ಸದನ ಸಮಿತಿ ರಚಿಸಿ ಶೀಘ್ರವೇ ತನಿಖೆ ಪ್ರಾರಂಭಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸಮಿತಿಯ ಅಧ್ಯಕ್ಷತೆಯನ್ನು ಎನ್. ಯೋಗೀಶ್ ಭಟ್ ವಹಿಸಲಿದ್ದಾರೆ. ಸಮಿತಿಯಲ್ಲಿ ಅಪ್ಪಚ್ಚು ರಂಜನ್, ಎನ್. ಮುನಿರಾಜು, ಬಿ.ಎನ್. ವಿಜಯಕುಮಾರ್, ನರಸಿಂಹ ನಾಯಕ್, ಡಾ. ಎಚ್.ಸಿ.ಮಹದೇವಪ್ಪ, ಕೆ.ಎಂ. ಕೃಷ್ಣಮೂರ್ತ್ರಿ, ಡಿ.ಕೆ. ಶಿವಕುಮಾರ್, ಸುನಿಲ್ ವಿ ಹೆಗಡೆ ಸದಸ್ಯರಾಗಿರುತ್ತಾರೆ.
ಸಮಿತಿ ಪರಿಶೀಲಿಸುವ ಅಂಶಗಳು: ಅಕ್ಷಯ ಪಾತ್ರೆ ಯೋಜನೆಯಡೆ ನಿರ್ವಹಿಸಲಾಗುತ್ತಿರುವ ಅಕ್ಷರ ದಾಸೋಹ ನಿರ್ವಹಣೆ ಗುಣಮಟ್ಟದ ಕುರಿತು ಪರಾಮರ್ಶೆ, ಸರ್ಕಾರದಿಂದ ಪಡೆಯುತ್ತಿರುವ ಅನುದಾನದ ದುರ್ಬಳಕೆ, ಅಕ್ಷರ ದಾಸೋಹಕ್ಕೆ ಅನುದಾನದ ಹೊರತಾಗಿ ಸಂಗ್ರಹಿಸುತ್ತಿರುವ ದೇಣಿಗೆ, ಸಂಗ್ರಹಿಸಿದ ಹಣದ ಬಿಸಿಯೂಟಕ್ಕೆ ಬಳಕೆಯಾಗುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲನೆ, ಇಸ್ಕಾನ್ ಹಣಕಾಸಿನ ಅವ್ಯವಹಾರ, ರಿಯಲ್ ಎಸ್ಟೇಟ್ ಮತ್ತು ದೇವಸ್ಥಾನದ ಹೆಸರಿನಲ್ಲಿ ಅವ್ಯವಹಾರ, ಅಕ್ಷರ ದಾಸೋಹ ಕಾರ್ಯಕ್ರಮದ ದುರುಪಯೋಗ ಮೊದಲಾದ ಅಂಶಗಳನ್ನು ಸಮಿತಿ ಪರಿಶೀಲಿಸಿ ವರದಿ ಸಲ್ಲಿಸಲಿದೆ.