ಕೊಪ್ಪಳ ಮಾ. ೦೫ (ಕರ್ನಾಟಕ ವಾರ್ತೆ) ; ಈ ಬಾರಿಯ ಬಜೆಟ್ನಲ್ಲಿ ಕೊಪ್ಪಳ ಜಿಲ್ಲೆಗೆ ತೋಟಗಾರಿಕೆ ಕಾಲೇಜು ಹಾಗೂ ರೈಸ್ ಟೆಕ್ನಾಲಜಿ ಪಾರ್ಕ್ ಮಂಜೂರು ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ತೋಟಗಾರಿಕಾ ಸಚಿವ ಉಮೇಶ್ ಕತ್ತಿ ಅವರಿಗೆ ಸಂಸದ ಶಿವರಾಮಗೌಡ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯು ಹೈದ್ರಾಬಾದ್ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದ್ದು, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ ಮತ್ತು ದಾಳಿಂಬೆಯನ್ನು ಬೆಳೆಯಲಾಗುತ್ತಿದೆ. ಇದಲ್ಲದೆ ಟೊಮೆಟೊ, ಮೆಣಸಿನಕಾಯಿ, ಕಲ್ಲಂಗಡಿ, ಮುಂತಾದ ಬೆಳೆಗಳನ್ನು ಅಂದಾಜು ೬೦೦೦ ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ವಾರ್ಷಿಕ ೩೦ ರಿಂದ ೪೦ ಕೋಟಿ ರೂ. ಮೊತ್ತದ ಆರ್ಥಿಕ ವಹಿವಾಟು ತೋಟಗಾರಿಕೆ ಬೆಳೆಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ದಾಳಿಂಬೆಯು ಉತ್ಕೃಷ್ಟ ಗುಣಮಟ್ಟದಿಂದ ಕೂಡಿರುವುದರಿಂದ ವಿದೇಶಗಳಿಗೆ ರಫ್ತಾಗುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಗೆ ತೋಟಗಾರಿಕೆ ಮಹಾವಿದ್ಯಾಲಯವನ್ನು ಸ್ಥಾಪಿಸುವುದು ಔಚಿತ್ಯಪೂರ್ಣವಾಗಿದೆ. ರಾಷ್ಟ್ರೀಯ ಹೆದ್ದಾರಿ ೬೩ ರ ಪಕ್ಕ ಮುನಿರಾಬಾದ್ ಬಳಿ ಲಭ್ಯವಿರುವ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ೪೬ ಎಕರೆ ಹಾಗೂ ಪಶುವೈದ್ಯಕೀಯ ಇಲಾಖೆಗೆ ಸಂಬಂಧಿಸಿದ ೮೦ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಕಾಲೇಜು ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಬಜೆಟ್ ಮಂಡನೆಗೂ ಮುನ್ನ ಅಂದರೆ ಕಳೆದ ಫೆ. ೨೩ ರಂದು ಸಂಸದ ಶಿವರಾಮಗೌಡ ಅವರು ಪತ್ರ ಬರೆದು ಮನವಿ ಸಲ್ಲಿಸಿದ್ದರು. ಸಂಸದರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಪ್ರಸಕ್ತ ಬಜೆಟ್ನಲ್ಲಿ ಹಸಿರು ನಿಶಾನೆ ತೋರಿಸಿದ್ದಾರೆ. ಅಲ್ಲದೆ ಜಿಲ್ಲೆಯ ಗಂಗಾವತಿ ತಾಲೂಕು ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ಮಂಜೂರು ಮಾಡಿರುವುದನ್ನು ಸ್ವಾಗತಿಸಿರುವ ಅವರು, ಉದ್ದೇಶಿತ ರೈಸ್ ಟೆಕ್ನಾಲಜಿ ಪಾರ್ಕ್ನಿಂದಾಗಿ ಜಿಲ್ಲೆ ಇನ್ನಷ್ಟು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ರಾಜ್ಯ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವರಾಜ್ ತಂಗಡಗಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.