ಭಟ್ಕಳ: ಧರ್ಮ ಗ್ರಂಥಗಳಿಗೆ ಯಾವುದೆ ಜಾತಿ ಇಲ್ಲ. ಪ್ರತಿಯೊಂದು ಧರ್ಮದ ಗ್ರಂಥಗಳು ಎಲ್ಲ ಜಾತಿ ಮತ್ತು ಧರ್ಮಗಳಿಗೆ ಸಮಾನವಾದ ಸಂದೇಶವನ್ನು ನೀಡುತ್ತವೆ ಎಂದು ಶಾಸಕ ಜೆ.ಡಿ.ನಾಯ್ಕ ಅಭಿಪ್ರಾಯ ಪಟ್ಟರು. ಅವರು ಬುಧವಾರ ರಾತ್ರಿ ಇಲ್ಲಿನ ಕೆ.ಎಚ್.ಬಿ. ಕಾಲೋನಿಯ ಸ್ಪೋಟ್ಸ್ ಯುತ್ ಕ್ಲಬ್ ನೀಡಿದ ಸನ್ಮಾನ ಹಾಗೂ ಪವಿತ್ರ ಕುರ್‌ಆನ್ ಗ್ರಂಥವನ್ನು ಉಡುಗರೆ ಪಡೆದು ಮಾತನಾಡುತ್ತಿದ್ದರು.
ಕುರ್‌ಆನ್ ಗ್ರಂಥದ ಬಗ್ಗೆ ತನಗೆ ಅಭಿಮಾನವಿದೆ ಎಂದ ಅವರು ರಾಮಯಾಣ,ಗೀತ,ಬೈಬಲ್ ಗಳನ್ನು ತಾನು ಓದಿದ್ದು ಈಗ ಕುರ್‌ಆನ್ ಗ್ರಂಥ ಉಡುಗರೆಯಾಗಿ ದೊರೆತಿರುವುದು ತನ್ನ ಪುಣ್ಯವೆಂದು ಬಣ್ಣಿಸಿದ ಅವರು ನಾವು ಎಲ್ಲರು ಪರಸ್ಪರ ಪ್ರೀತಿ ಮತ್ತು ಸೌಹಾರ್ಧತೆಯಿಂದ ಬಾಳಿದರೆ ನಾವು ಈ ಭಟ್ಕಳವನ್ನು ಮಾದರಿ ನಗರವನ್ನಾಗಿ ಮಾಡಲು ಸಾಧ್ಯವೆಂದರು. ಭಟ್ಕಳವನ್ನು ಸೂಕ್ಷ್ಮ ಪ್ರದೇಶವೆಂಬ ಪಟ್ಟ ಕಟ್ಟುವುದರಲ್ಲಿ ಬಿಜೆಪಿಗರ ಪಾತ್ರ ಪ್ರಮುಖವಾದುದು ಎಂದ ಅವರು ಮಾಧ್ಯಮಗಳ ಕಪೋಲಕಲ್ಪಿತ ವರದಿಗಳು ಸಹ ಇದಕ್ಕೆ ಕಾರಣ ಎಂದರು.
ಖ್ಯಾತ ನವಾಯತಿ ಕವಿಗಳಾದ ದಿವಂಗತ ಬೈದಾ ಶಬ್ಬಿರ‍್ ಹಾಗೂ ಅಬ್ದುಲ್ ರಹೀಮ್ ಇರ್ಷಾದ್ ರ ಸ್ಮರಣೆಯಲ್ಲಿ ಹಮ್ಮಿಕೊಂಡ ನವಾಯತಿ ಮುಷಾಯಿರ ಕವಿಗೋಷ್ಟಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಜೆ.ಡಿ.ನಾಯ್ಕರಿಗೆ ಕೆ.ಎಚ್.ಬಿ. ಕಾಲೋನಿಯಲ್ಲಿ ರಸ್ತೆ ದುರಸ್ತಿಯನ್ನು ಕೈಗೊಂಡು ಕಾಲೋನಿಗೆ ಉತ್ತಮ ಸೌಲಭ್ಯವನ್ನು ನೀಡಿದ ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸಲು ಅವರಿಗೆ ಶಾಲು ಹೊದಿಸಿ ಕುರ್‌ಆನ್ ಗ್ರಂಥವನ್ನು ಉಡುಗರೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಟ್ಕಳ ತಾಲೂಕಾ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಎಮ್.ಆರ‍್. ಮಾನ್ವಿ ಕುರ್‌ಆನ್ ಗ್ರಂಥದ ಕುರಿತು ಸಂಕ್ಷಿಪ್ತವಾಗಿ ಮಾತನಾಡಿ ಇದು ಇಡಿ ಮನುಕುಲದ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನಿಂದ ಅವತೀರ್ಣವಾದ ಗ್ರಂಥವಾಗಿದ್ದು ಇದನ್ನು ಮುಸ್ಲಿಮರು ಕೇವಲ ತಮ್ಮ ಗ್ರಂಥವೆಂದು ತಪ್ಪಾಗಿ ಭಾವಿಸಿದ್ದಾರೆ ಎಂದರು.ವೇದಿಕೆಯಲ್ಲಿ ಪುರಸಭಾ ಸದಸ್ಯ ಇನಾಯತುಲ್ಲಾ ಶಾಬಂದ್ರಿ, ಅಬ್ದುಲ್ ಅಲೀಮ್ ಖಾಸ್ಮಿ, ಕೆಎಚ್.ಬಿ ಕಾಲೋನಿ ಯುತ್ ಕ್ಲಬ್ ಕಾರ್ಯದರ್ಶಿ ಇರ್ಫಾನ್ ಮೊಹತೆಶಮ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಜ್ಲಿಸೆ ಇಸ್ಲಾಹ್ ತಂಝೀಮ್ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಸೈಯ್ಯದ್ ಖಾಲಿದ್ ವಹಿಸಿದ್ದರು.
ನಂತರ ಜರುಗಿದ ನವಾಯತಿ ಮುಷಾಯಿರದಲ್ತಿ ನವಾಯತಿ ಗಾನ ಕೋಗಿಲೆ ಸೈಯ್ಯದ್ ಸಮಿಯುಲ್ಲಾ ಬರ್ಮಾವರ, ಅಬ್ದುಲ್ಲಾ ರಫೀಖ್, ಸೈಯ್ಯದ್ ಅಶ್ರಫ್ ಬರ್ಮಾವರ‍್, ಮುಸ್ತಫಾ ತಾಬಿಷ್, ಸದೀಖ್ ನವೀದ್, ಸಲೀಮ್ ಮರ್ಚಂಟ್, ಉಸ್ಮಾನ್ ಜಬಾಲಿ ಮತ್ತಿರರು ತಮ್ಮ ಕವಿತೆಗಳಿಂದ ಸಭಿಕರನ್ನು ರಂಜಿಸಿದರು.