ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂದಾಪುರ: 25 ವರ್ಷಗಳ ಬಳಿಕ ಮತ್ತೆ ಕ್ಲಾಸ್ ರೂಮಿನಲ್ಲಿ ಪದವಿ ಮಿತ್ರರು!

ಕುಂದಾಪುರ: 25 ವರ್ಷಗಳ ಬಳಿಕ ಮತ್ತೆ ಕ್ಲಾಸ್ ರೂಮಿನಲ್ಲಿ ಪದವಿ ಮಿತ್ರರು!

Mon, 26 Apr 2010 18:08:00  Office Staff   S.O. News Service

ಕುಂದಾಪುರ, ಏಪ್ರಿಲ್ ೨೬:

 

ಕಂಗೊಳಿಸುವಂತೆ ನಡೆದಿಹುದು ಆಟವು ನೋಡು,

ಅಗಲಿ ಕೂಡುತ ಮತ್ತೆ ಕೂಡಿ ಅಗಲಿ.

ಕಣ್‌ಗೊನೆಯು ಹೊರಹೊರಗೆ ಅಳಲಿ-ನಗಲಿ.

-(ಅಂಬಿಕಾತನಯದತ್ತ)

 

ಆ ಸುಂದರ ಪ್ರೆಸ್‌ನೋಟ್ ಆರಂಭಗೊಳ್ಳುವುದು ಬೇಂದ್ರೆಯವರ ಕವನದ ಈ ಅನನ್ಯ ಸಾಲುಗಳಿಂದ.

 

ಕುಂದಾಪುರವೆಂಬ ಈ ಪುಟ್ಟ ಊರಿನ ತುಂಬಾ ಏನಿದೆ ಎಂದು ಹುಡುಕ ಹೊರಟರೆ ಮುಕ್ಕಾಲು ಪಾಲು ಕಾಲೇಜು ದಿನದ ನೆನಪುಗಳು! ಎಂಬುದು ಅದರಲ್ಲಿನ ಮೊದಲ ಮಾತು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ೧೯೮೪-೮೫ರ ಸಾಲಿನ ಬಿ.ಕಾಂ ಪದವಿ ತರಗತಿಯ ಎ ಮತ್ತು ಬಿ ವಿಭಾಗದ ವಿದ್ಯಾರ್ಥಿಗಳು ತಮ್ಮ ಪದವಿ ದಿನಗಳ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ನಗರದಲ್ಲಿ ’ಸ್ನೇಹ ಸಮ್ಮಿಲನ’ ಎಂಬ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಇತಿಹಾಸದಲ್ಲಿಯೇ ೨೫ ವರ್ಷಗಳ ನಂತರ ತಮ್ಮ ಕಾಲೇಜು ದಿನಗಳನ್ನು ನೆನೆಸಿಕೊಂಡು ನಡೆಯುತ್ತಿರುವ ಕಾರ್ಯಕ್ರಮ ಇದೇ ಮೊದಲನೆಯದಾಗಿದೆ. ರವಿವಾರ, ಮೇ೨ರ ಬೆಳಿಗ್ಗೆ ೯ಗಂಟೆಗೆ ಸ್ಥಳೀಯ ಶೆರೋನ್ ಹೊಟೇಲ್ ಸಭಾಂಗಣದಲ್ಲಿ ಅಂದಿನ ಬಿ.ಕಾಂ ಪದವೀಧರರ ’ಸ್ನೇಹ ಸಮ್ಮಿಲನ’ ಕಾರ್ಯಕ್ರಮ ನಡೆಯಲಿಕ್ಕಿದೆ. ಅಂದು ಬೆಳಿಗ್ಗೆಯಿಂದ ಸಂಜೆಯ ತನಕ ಇಡೀ ದಿನ ಈ ಕಾರ್ಯಕ್ರಮ ಜರುಗಲಿದೆ. ೧೨೫ಕ್ಕೂ ಅಧಿಕ ಸಂಖ್ಯೆಯ ಸಹಪಾಠಿಗಳು ಅಂದು ಭಾಗವಹಿಸಲಿದ್ದು, ಸ್ನೇಹಿತರ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಸ್ನೇಹ ಸಮ್ಮಿಲನ ಸಂಘಟನಾ ಸಮಿತಿ ಉಪಾಧ್ಯಕ್ಷ, ಪತ್ರಕರ್ತ ವಿನಯ ಪಾಯಸ್ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ಕಾಲೇಜು ದಿನಗಳ ಅಧ್ಯಾಪಕರನ್ನು ಗೌರವಿಸಲು ಗುರುವಂದನಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಅವರು ನುಡಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಭಂಡಾರ್ಕಾರ್ಸ್ ಕಾಲೇಜು ನಿವ್ರತ್ತ ಪ್ರಾಂಶುಪಾಲ ಪ್ರೊ. ನಾರಾಯಣ ಆಚಾರ್ಯ ಅಧ್ಯಕ್ಷತೆ ವಹಿಸಲಿರುವರು. ರೋಟರಿ ಗವರ್ನರ್ ಎ.ಎಸ್.ಎನ್.ಹೆಬ್ಬಾರ್ ಮುಖ್ಯ ಅತಿಥಿಗಳಾಗಿರುತ್ತಾರೆ. ೮೪-೮೫ರ ಸಾಲಿನ ಬಿ.ಕಾಂ.ತರಗತಿಯ ಎಲ್ಲ ಸ್ನೇಹಿತರ ಕುಟುಂಬ ಸಹಿತ ಫೋಟೊ ಮತ್ತು ವಿವರಗಳನ್ನೊಳಗೊಂಡ ನೆನಪಿನ ಹೊತ್ತಗೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದೆಂದು ವಿನಯ ಪಾಯಸ್ ನುಡಿದರು.

 

ಸ್ನೇಹ ಸಮ್ಮಿಲನ ಸಂಘಟನಾ ಸಮಿತಿ ಅಧ್ಯಕ್ಷ, ಸಾರಿಗೆ ಉದ್ಯಮಿ ಎಸ್. ಕೃಷ್ಣಾನಂದ ಛಾತ್ರ ಎಲ್ಲ ಗೆಳೆಯ ಗೆಳತಿಯರ ವಿಳಾಸವನ್ನು ಹಿಡಿದುಕೊಂಡು ಅವರುಗಳ ಜಾಡನ್ನು ಹುಡುಕುತ್ತಾ ಹೊರಟಂತೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿತ್ತು ಎಂದರು. ೧೬೦ ವಿದ್ಯಾರ್ಥಿ ಮಿತ್ರರ ಪೈಕಿ ೧೫೦ಕ್ಕೂ ಹೆಚ್ಚಿನ ಮಿತ್ರರನ್ನು ಸಂಪರ್ಕಿಸಿ ಅವರಿಗೆ ’ಸ್ನೇಹ ಸಮ್ಮಿಲನ’ ಕಾರ್ಯಕ್ರಮದ ಕುರಿತು ಹೇಳಿದಾಗ ಅವರೆಲ್ಲ ಸಂಭ್ರಮದಿಂದ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದಾಗಿ ತಿಳಿಸಿದರು.

 

ಸಮಿತಿಯ ಸಲಹೆಗಾರರಾದ ಪ್ರೊ. ಎಂ. ಮೋಹನದಾಸ ಪೈ ತನ್ನ ವಿದ್ಯಾರ್ಥಿಗಳು ಇಂತಹ ಅಪೂರ್ವ ಕಾರ್ಯಕ್ರಮ ಸಂಘಟಿಸುತ್ತಿರುವುದು ಖುಷಿ ನೀಡುತ್ತಿದೆ ಎಂದರು. ಬದುಕಿನ ದಾರಿಯಲ್ಲಿ ಕಾಲೇಜು ದಿನಗಳನ್ನು, ಅಂದಿನ ಗೆಳೆಯರು, ಗುರುಗಳನ್ನು ನೆನಪಿಸಿಕೊಂಡು ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮಕ್ಕೆ ಸಹಕಾರ ಕೋರಿದರು.

 

ಅಂದು ವಿದಾಯದ ಘಳಿಗೆಯಲ್ಲಿ ಹೇಳಿದ್ದೆವು.

 

ಬೀಚ್ ರಾಹ್ ಮೆ ದಿಲ್‌ಬರ್

ಬಿಛಡ್ ಜಾಯೆ ಕಹೀಂ ಹಮ್ ಅಗರ್

ಔರ್ ಸೂನಿಸಿ ಲಗೆ ತುಮ್ಹೆ ಜೀವನ್ ಕಿ ಯೇ ಡಗರ್

ಹಮ್ ಲೌಟ್ ಆಯೆಂಗೆ ತುಮ್ ಯೂಂಹೀ ಬುಲಾತೆ ರೆಹನಾ...

ಕಭಿ ಅಲ್‌ವಿದಾ ನ ಕೆಹನಾ...

 

 

ಹೌದು, ಅಂದು ಕೊಟ್ಟ ಮಾತಿಗೆ ಬದ್ದರಾಗಿ ಇಂದು ಮತ್ತೊಮ್ಮೆ ಬಾಳ ಪಯಣದ ಹಾದಿಯಲ್ಲಿ ಆ ಗೆಳೆಯರನ್ನು ಕರೆಯುತ್ತಿದ್ದೇವೆ, ಕೈ ಕುಲುಕಲು, ಹಲೊ ಎನ್ನಲು, ನಗಲು-ನಗಿಸಲು, ಸುಖ-ದು:ಖಗಳನ್ನು ಹಂಚಿಕೊಳ್ಳಲು ಮತ್ತು ನೆನಪುಗಳನ್ನು ಇನ್ನಷ್ಟು ಹಸನಾಗಿಸಲು. ಇದೊಂದು ಅಪೂರ್ವ, ಅನನ್ಯ ಕಾರ್ಯಕ್ರಮ. ಬನ್ನಿ, ಸಹಕರಿಸಿ, ಅಪೂರ್ವ ಕ್ಷಣಗಳಲ್ಲಿ ಭಾಗಿಯಾಗಿ ಎಂದು ಸಂಘಟಕರು ವಿನಂತಿಸಿದ್ದಾರೆ.

 

 

ವರದಿ: ನೊಯೆಲ್ ಚುಂಗಿಗುಡ್ಡೆ.  

 

 


Share: