ಚಿಕ್ಕಬಳ್ಳಾಪುರ ಡಿಸೆಂಬರ್ ೦೧: ಜನರಲ್ಲಿ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಬಹಳ ಅಗತ್ಯವಾದದು ಎಂದು ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಭಾರತದಲ್ಲಿ ಅತಿಹೆಚ್ಚು ಸೋಂಕುಳ್ಳ ೬ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿಹೆಚ್ಚು ಸೋಂಕು ಹರಡುತ್ತಿರುವ ಜಿಲ್ಲೆಯಾಗಿದ್ದು. ಜಿಲ್ಲೆಯಲ್ಲಿ 394 ಹೆಚ್.ಐ.ವಿ/ಏಡ್ಸ್ ಪ್ರಕರಣಗಳು ಕಂಡುಬಂದಿದೆ ಎಂದು ಹೇಳಿದರು.
ಏಡ್ಸ್‌ನಿಂದ ಬಳಲುತ್ತಿರುವವರಿಗೆ ಅತ್ಮಾವಿಶ್ವಾಸದ ಜೊತೆಗೆ ಅವರಲ್ಲಿ ಬದುಕುವ ದೈರ್ಯವನ್ನು ತುಂಬಬೇಕೆಂದರಲ್ಲದೆ ಸಾರ್ವಜನಿಕರಲ್ಲಿ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ ಏಡ್ಸ್ ರೋಗ ಹರಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರು ರಕ್ತದಾನ ಮಾಡುವುದರಿಂದ ಒಬ್ಬ ಮನುಷ್ಯನಿಗೆ ಜೀವದಾನ ಮಾಡಿದಂತಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ರಕ್ತ ದಾನ ಮಾಡಲು ಪ್ರೋತ್ಸಹಿಸಬೇಕು. ಎಲ್ಲೇ ರಕ್ತದಾನ ಶಿಬಿರಗಳು ನಡೆದರು ಸಹಾ ಎಲ್ಲಾ ಯುವಕರು ಸ್ವಯಂ ಪ್ರೇರಿತರಾಗಿ ಹೋಗಿ ರಕ್ತದಾನ ಮಾಡಬೇಕು ಎಂದರಲ್ಲದೆ ಚಿಕ್ಕಬಳ್ಳಾಪುರದಲ್ಲಿ ಬ್ಲೆಡ್ ಬ್ಯಾಂಕ್ ಬೇಕಾಗಿದೆ ಅದಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈಗಾಗಲೇ ರಕ್ತ ಶೇಕರಣ ಘಟ್ಟಕವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ತೆರೆಯಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷಿಣಿ ಶ್ರೀಮತಿ ವಿನುತ ಶ್ರೀನಿವಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಏಡ್ಸ್ ರೋಗದ ಬಗ್ಗೆ ಜನರು ಭಯ ಪಡೆಯಬೇಕಾಗಿಲ್ಲ ಹಿಂದೆ ಏಡ್ಸ್ ಬಂದರೆ ಜನರು ಅವರನ್ನು ಕೀಳಾಗಿ ನೋಡುತ್ತಿದ್ದರು. ಆದರೆ ಈಗ ತಂತ್ರಜ್ಞಾನ ಉನ್ನತ ಮಟ್ಟದಲ್ಲಿ ಬೆಳೆದಿದೆ. ಏಡ್ಸ್ ಗುಣವಾಗದ ಚಿಕಿತ್ಸೆ ಅಲ್ಲದಿದ್ದರು ಅವರಲ್ಲಿ ಬದುಕುವ ಆಸೆಯನ್ನು ಮೂಡಿಸುವ ಚಿಕಿತ್ಸೆಗಳು ಇವೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಚೆಂಡೂರು ವೆಂಕಟೇಶ್ ಮಾತನಾಡಿ ಸಾರ್ವಜನಿಕರು ಏಡ್ಸ್ ಬಗ್ಗೆ ಅರಿವು ಇರಬೇಕು ಮತ್ತು ಜಾಗೃತರಾಗಬೇಕು. ಹೆಚ್ಚು ಜಾಗೃತರಾದಾಗ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದರಲ್ಲದೆ ಪಟ್ಟಣ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದ ಜನರಲ್ಲಿಯೂ ಏಡ್ಸ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಎಂ.ಪ್ರಕಾಶ್ ಮಾತನಾಡಿ ಏಡ್ಸ್ ಸೋಂಕು ಹರಡಿರುವ ರೋಗಿಗಳನ್ನು ಸಮಾಜದಿಂದ ಹೊರಗಿಡುವ ಪ್ರಯತ್ನ ಮಾಡದೆ ಸಮಾಜದ ಮುಖ್ಯ ವಾಹಿನಿಗೆ ತಂದು ಅವರು ಕೂಡ ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶ ಮಾಡಿಕೊಡಬೇಕೆಂದರು.

ಇದೇ ಸಂದರ್ಭದಲ್ಲಿ ಜಾಥಾ ಕಾರ್ಯಕ್ರಮ, ರಕ್ತದಾನ ಶಿಬಿರ ಮತ್ತು ರಕ್ತದಾನಿಗಳಿಗೆ ಸನ್ಮಾನ ಮಾಡಲಾಯಿತು.ಸಮಾರಂಭದಲ್ಲಿ ಜಿಲ್ಲಾಧಿಕಾರಿ ಅನ್ವರ್ ಪಾಷ, ಜಿ.ಪಂ. ಮುಖ್ಯಕಾರ್ಯನಿರ್ವಣಾಧಿಕಾರಿ ಎನ್.ಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ವಿ.ರಾಜೀವ್ ಉಪಸ್ಥಿತರಿದ್ದರು.
ಪೋಟೋ ವಿವರ