ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಚಿಕ್ಕಮಗಳೂರು: ಬಾಬಾಬುಡನ್‌ಗಿರಿಯಲ್ಲಿ ನ್ಯಾಯಾಲಯದ ಆದೇಶ ಪಾಲಿಸಿ: ಜೆಡಿ‌ಎಸ್ ಒತ್ತಾಯ

ಚಿಕ್ಕಮಗಳೂರು: ಬಾಬಾಬುಡನ್‌ಗಿರಿಯಲ್ಲಿ ನ್ಯಾಯಾಲಯದ ಆದೇಶ ಪಾಲಿಸಿ: ಜೆಡಿ‌ಎಸ್ ಒತ್ತಾಯ

Fri, 20 Nov 2009 03:47:00  Office Staff   S.O. News Service
ಚಿಕ್ಕಮಗಳೂರು, ನ.19- ಬಾಬಾಬುಡನ್‌ಗಿರಿಯಲ್ಲಿ ನ್ಯಾಯಾಲಯದ ನಿರ್ಬಂಧ ಇರುವುದರಿಂದ ವಿವಾದಿತ ಸ್ಥಳದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರವು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಜೆಡಿ‌ಎಸ್ ಮುಖಂಡ ಎಚ್.ಎಚ್. ದೇವರಾಜ್ ಒತ್ತಾಯಿಸಿದ್ದಾರೆ. 

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ರಾಜಕೀಯದಲ್ಲಿ ಕೆಲಸವಿಲ್ಲದ ಸುನೀಲ್‌ಕುಮಾರ್‌ರಂತಹ ರಾಜಕಾರಣಿಗಳು ಮತ್ತು ಸಂಘಪರಿವಾರದ ಕಾರ್ಯಕರ್ತರು ಇಲ್ಲಿನ ವಿವಾದಿತ ವಿಷಯದಲ್ಲಿ ಮತ್ತೆ ತಲೆಹಾಕಿ ಸಮಸ್ಯೆ ಶುರುಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಇವರಿಂದ ಜನಸಾಮಾನ್ಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತವು, ನ.೨೧ರಿಂದ ಡಿ.೧ರವರೆಗೆ ಸಂಘ ಪರಿವಾರ ಆಯೋಜಿಸಿರುವ ದತ್ತಮಾಲೆ ಮತ್ತು ದತ್ತಜಯಂತಿ ಕಾಲದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಂಡು ಬರಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಬಳಿಕ ಎಚ್.ಟಿ. ರಾಜೇಂದ್ರ ಮಾತನಾಡಿ ರಾಜ್ಯದಲ್ಲಿ ಹದಿನೆಂಟು ತಿಂಗಳ ಕಾಲ ಆಡಳಿತ ನಡೆಸಿರುವ ಬಿಜೆಪಿಯು ಯಾವುದೇ ಜನಪರ ಆಡಳಿತವನ್ನು ನೀಡಿಲ್ಲ. ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಆರಂಭದಲ್ಲಿ ಬಿಜೆಪಿ ನಾಯಕರು ಕೊಟ್ಟ ಆಶ್ವಾಸನೆಗಳು ಹುಸಿಯಾಗಿರುವುದು ಜನಸಾಮಾನ್ಯರು ಅರಿತುಕೊಂಡಿದ್ದಾರೆ.  ಬಿಜೆಪಿಗರ ರಾಜಕೀಯ ಕಚ್ಚಾಟದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಂಗವುಂಟಾಗಿದೆ ಎಂಬುದು ಜನತೆಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಹೇಳಿದರು. 

ಇಲ್ಲಿನ ನಾಲ್ಕು ಮಂದಿ ಶಾಸಕರು ಚುನಾಯಿತರಾದರೂ ಜಿಲ್ಲೆಯ ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಮತ್ತು ವಿದ್ಯುತ್‌ನಲ್ಲಿ ಭಾರಿ ಅಡಚಣೆ ಉಂಟಾಗುತ್ತಿದೆ ರಸ್ತೆಗಳು ಗುಂಡಿ-ಗೊಟರುಗಳಿಂದ ತುಂಬಿ ಹೋಗಿವೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕಾಫಿ, ಅಡಿಕೆ, ಮೆಣಸು ಬೆಳೆಗಳು ಪರಿಹಾರ ಕಾಣದಂತಹ ಪರಿಸ್ಥಿತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೇವಲ ನಾಮಕಾವಸ್ಥೆಗೆ ಮಾತ್ರವೇ ಇದ್ದಾರೆ. ಇತ್ತೀಚೆಗೆ ಕೇಂದ್ರ ತಂq ಸಂಕಷ್ಟದಲ್ಲಿರುವ ಬೆಳೆಗಾರರ ಸಮಸ್ಯೆಗಳ ಪರಿಶೀಲನೆಗೆ ಬಂದಾಗ ಇಲ್ಲಿನ ಯಾವುದೇ ಶಾಸಕರು ಬೆಳೆ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲು ಮುಂದೆ ಬರಲಿಲ್ಲ. ಇಲ್ಲಿನ ಜನರಿಗೆ ಇವರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.

ಸರ್ಕಾರದ ಸ್ವಜನ ಪಕ್ಷಪಾತ ಧೋರಣೆ, ಶಾಸಕರ ದುಂಡಾವರ್ತನೆ ಹಾಗೂ ಸರಕಾರದ ಮತ್ತು ಆಡಳಿತ ವರ್ಗದ ಎಲ್ಲಾ ವೈಫಲ್ಯಗಳನ್ನು ಖಂಡಿಸಿ ನ.೨೩ಕ್ಕೆ ಜಿಲ್ಲಾ ಕೇಂದ್ರದಲ್ಲಿ ಜೆಡಿ‌ಎಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿ‌ಎಸ್ ಅಧ್ಯಕ್ಷ ರಾಜು, ತಿಮ್ಮೇಗೌಡ, ಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು. 



Share: