ಬೆಂಗಳೂರು, ಡಿ.೫: ಚಾಲಕರ ನೇಮಕಾತಿಯಲ್ಲಿ ‘ಸ್ವಯಂಚಾಲಿತ ಎಲೆಕ್ಟ್ರಾನಿಕ್ ವಾಹನ ಚಾಲನಾ ಪರೀಕ್ಷಾ ವ್ಯವಸ್ಥೆ (ಆಟೋಮೇಟೆಡ್ ಎಲೆಕ್ಟ್ರಾನಿಕ್ ಡ್ರೈವಿಂಗ್ ಟೆಸ್ಟ್)ಯನ್ನು ಅಳವಡಿಸಿಕೊಂಡಿರುವ ದೇಶದ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದ್ದು, ರಾಜ್ಯ ಸಾರಿಗೆ ನಿಗಮಕ್ಕೆ ಉತ್ಕೃಷ್ಟ ಪ್ರಶಸ್ತಿ ಲಭಿಸಿದೆ.
ದೆಹಲಿಯಲ್ಲಿನ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾರಿಗೆ ಇಲಾಖೆಯ ಸಮಾವೇಶದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ, ರಾಜ್ಯದ ಸಾರಿಗೆ ಸಚಿವ ಆರ್.ಅಶೋಕ್‌ರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆರ್.ಅಶೋಕ್, ದೇಶದ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿದ್ದು, ಕುಡಿಯುವ ನೀರು, ವಿದ್ಯುತ್‌ಚ್ಛಕ್ತಿ ಹಾಗೂ ಸಾರಿಗೆ ಸೌಲಭ್ಯಗಳನ್ನು ಸರಕಾರದಿಂದ ನೀರಿಕ್ಷಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.
ನಗರ ಸಾರಿಗೆ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕಾಗಿದೆ. ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆ ನಾಗರಿಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿವೆ. ಅಲ್ಲದೆ, ವಾಹನ ನಿಲುಗಡೆ ಹಾಗೂ ಜಾಹೀರಾತು ಮೂಲಗಳಿಂದ ಉತ್ತಮ ಆದಾಯವನ್ನು ಕ್ರೋಢಿಕರಿಸುತ್ತಿವೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಮಹಾನಗರ ಸಾರಿಗೆ ಪ್ರಾಧಿಕಾರ ಸ್ಥಾಪಿಸುವ ಸಂಬಂಧ ಚಿಂತನೆ ನಡೆಸಲು ಉದ್ದೇಶಿಸಲಾಗಿದೆ. ಕೇಂದ್ರವು ರಾಜ್ಯ ಸರಕಾರದೊಂದಿಗೆ ಕೈ ಜೋಡಿಸಿ, ಪರಿಣಾಮಕಾರಿ ಸಮೂಹ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಯೋಜನೆ ಕುರಿತು ಗಮನ ಹರಿಸಬೇಕು ಎಂದು ಅಶೋಕ್ ಕೋರಿದರು.
ಕಳೆದ ಜೂನ್‌ನಲ್ಲಿ ನರ್ಮ್ ಯೋಜನೆಯಡಿಯಲ್ಲಿ ಮೈಸೂರಿನಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣವನ್ನು ನಿರ್ಮಾಣಮಾಡಲಾಗಿದೆ. ಇದಕ್ಕೆ ಕೇಂದ್ರ ಮತ್ತು ನಗರಾಭಿವೃದ್ಧಿ ಇಲಾಖೆಗೆ ಅವರು ಅಭಿನಂದನೆ ಸಲ್ಲಿಸಿದರು.
ಬಾಕ್ಸ್‌ಮಾಡಿ: ಪ್ರಯಾಣಿಕರ ಸುರಕ್ಷತೆಗಾಗಿ ಅತ್ಯುತ್ತಮ ಚಾಲನ ಕೌಶಲ್ಯವುಳ್ಳ ಚಾಲಕರ ನೇಮಕಾಯಿಯಲ್ಲಿ ಕಠಿಣ ಚಾಲನ ಪರೀಕ್ಷೆಯನ್ನು ನಿಗಮವು ಅಳವಡಿಸಿಕೊಂಡಿದೆ.
ದೇಶದಲ್ಲೆ ಪ್ರಪ್ರಥಮವಾಗಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿ ಪಾರದರ್ಶಕ ರೀತಿಯಲ್ಲಿ ಚಾಲಕರ ನೇಮಕಾತಿ ಮಾಡಲು ಆಟೋಮೇಟೆಡ್ ಎಲೆಕ್ಟ್ರಾನಿಕ್ ಡ್ರೈವಿಂಗ್ ಟೆಸ್ಟ್‌ನ್ನು ಅಳವಡಿಸಿಕೊಂಡಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಕೆಎಸ್‌ಆರ್‌ಟಿಸಿ ಪಾತ್ರವಾಗಿದೆ. ಈ ವ್ಯವಸ್ಥೆಯಲ್ಲಿ ೭೦೦೦ ಕ್ಕಿಂತಲೂ ಹೆಚ್ಚಿನ ಚಾಲಕರನ್ನು ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ರಾಮಚಂದ್ರನ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಹಾಗೂ ನಿರ್ದೇಶಕ ಎಂ.ಎ.ಸಲೀಂ ಉಪಸ್ಥಿತರಿದ್ದರು.