ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಗಿಲೆತ್ತರಕ್ಕೆ ಏರಲಿ ಜಿಲ್ಲೆಯ ಖ್ಯಾತಿ : ಜಿಲ್ಲಾಧಿಕಾರಿ

ಮುಗಿಲೆತ್ತರಕ್ಕೆ ಏರಲಿ ಜಿಲ್ಲೆಯ ಖ್ಯಾತಿ : ಜಿಲ್ಲಾಧಿಕಾರಿ

Sat, 04 May 2024 02:37:13  Office Staff   SO News

ಕಾರವಾರ : ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾನ ಜಾಗೃತಿಯ ಕುರಿತಂತೆ ಈಗಾಗಲೇ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗಿದೆ. ಈ ಜಾಗೃತಿಯ ಪರಿಣಾಮದಿಂದ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಮತದಾನ ನಡೆದು , ಜಿಲ್ಲೆಯ ಮತದಾರರು ರಾಜ್ಯದಲ್ಲಿ ಜಿಲ್ಲೆಯ ಖ್ಯಾತಿಯನ್ನು ಮುಗಿಲೆತ್ತರಿಗೆ ಏರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸ್ವೀಪ್ ಕಾರ್ಯಕ್ರಮದಡಿ ಮತದಾನ ಜಾಗೃತಿ , ನಿಮಿತ್ತ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಆಯೋಜಿಸಿದ್ದ ಗಾಳಿಪಟ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯಲ್ಲಿ 16.41 ಲಕ್ಷ ಮತದಾರರಿದ್ದು, ಮೇ 7 ರಂದು ಎಲ್ಲಾ ಮತದಾರರು ತಪ್ಪದೇ ಮತಗಟ್ಟೆಗೆ ಬಂದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಸಾವಿರಾರು ಕಿ.ಮೀ ದೂರದಲ್ಲಿನ ವಿದೇಶದಲ್ಲಿರುವ ಹಲವು ಮಂದಿ ಮತದಾನಕ್ಕೆ ಜಿಲ್ಲೆಗೆ ಆಗಮಿಸುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಉದ್ಯೋಗ ನಿಮಿತ್ತ ಹಾಗೂ ವಿವಿಧ ಕಾರಣಗಳಿಂದ ದೇಶದ ಹಾಗೂ ರಾಜ್ಯದ ವಿವಿದ ಭಾಗಗಳಲ್ಲಿರುವ ಜಿಲ್ಲೆಯ ಮತದಾರರು ಸಹ ಮೇ 7 ರಂದು ಜಿಲ್ಲೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಮತದಾನವಾಗುವಂತೆ ಮಾಡಬೇಕು ಎಂದರು.

ಮೇ 7 ರಂದು ಪ್ರತಿಯೊಬ್ಬರೂ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಬೇಕು. ಸರ್ಕಾರವು ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವ ಅವಕಾಶ ನೀಡಿದೆ. ದೇಶದ ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರು ಸೈನಿಕರೂ ಸಹ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಜಿಲ್ಲೆಯ ಯಾರೂಬ್ಬರೂ ಮತದಾನದಿಂದ ಹೊರಗುಳಿಯದೇ ತಪ್ಪದೆ ಮತ ಚಲಾಯಿಸುವ ಮೂಲಕ ಚುನಾವಣಾ ಪರ್ವವನ್ನು ಗರ್ವದಿಂದ ಆಚರಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯು ಮತ್ತಷ್ಟು ಬಲಿಷ್ಠವಾಗಲು ತಮ್ಮ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸ್ವೀಪ್ ಜಾಗೃತಿ ಸಾರುವ 200 ಕ್ಕೂ ಆಧಿಕ ಗಾಳಿಪಟಗಳನ್ನು ಹಾರಿಸುವ ಮೂಲಕ ವಿಶಿಷ್ಠ ರೀತಿಯಲ್ಲಿ ಮತದಾನ ಜಾಗೃತಿ ಸಂದೇಶ ಸಾರಲಾಯಿತು. ಮತದಾರರ ಪ್ರತಿಜ್ಞಾ ವಿಧಿ ಭೋದನೆ ನಡೆಯಿತು.

ಗಾಳಿಪಟ ಉತ್ಸವ ಕಾರ್ಯಕ್ರಮಕ್ಕೂ ಮೊದಲು, ಆಲಿಗದ್ದಾ ಕಡಲತೀರದಿಂದ ರವೀಂದ್ರ ನಾಥ ಠಾಗೂರ್ ಕಡಲತೀರದವರೆಗೆ ಬೋಟ್ ರ‍್ಯಾಲಿ ನಡೆಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Share: