ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ: ಯುಪಿಎ ದರ್ಬಾರ್ - ಬಡವರ ಮೇಲೆ ಬೆಲೆಯೇರಿಕೆಯ ಬರೆ

ನವದೆಹಲಿ: ಯುಪಿಎ ದರ್ಬಾರ್ - ಬಡವರ ಮೇಲೆ ಬೆಲೆಯೇರಿಕೆಯ ಬರೆ

Fri, 12 Feb 2010 07:51:00  Office Staff   S.O. News Service

ಆಹಾರ ಬೆಲೆಯೇರಿಕೆ

 

: ಈಗ ಹೊಣೆ ಜಾರಿಸಿಕೊಳ್ಳುವ ಪ್ರಯತ್ನ: 

 ಆಹಾರ ಪದಾರ್ಥಗಳ ಬೆಲೆಯೇರಿಕೆ ಎಂಬೊಂದು ಸಮಸ್ಯೆಯಿದೆ ಎಂದ ಕೊನೆಗೂ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಇದನ್ನು ಒಪ್ಪಿಕೊಳ್ಳಲು ಆರು ತಿಂಗಳು ತೆಗೆದುಕೊಂಡ ಸರಕಾರ ಆನಂತರವೂ ಗಂಭೀರ ಕ್ರಮಗಳನ್ನೇನೂ ಕೈಗೊಂಡಿಲ್ಲ ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘ ಟಿಪ್ಪಣಿ ಮಾಡಿದೆ. ಆಹಾರ ಧಾನ್ಯಗಳ ಪೂರೈಕೆ ಕಡಿಮೆಯಾದುದರಿಂದ ಅಥವಾ ಬೇಡಿಕೆ ಹೆಚ್ಚಿದುದರಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳುತ್ತಿರುವ ಕೇಂದ್ರ ಸರಕಾರ ಹೊಣೆಯನ್ನು ರಾಜ್ಯ ಸರಕಾರಗಳ ಮೇಲೆ ದಾಟಿಸಲು ಪ್ರಯತ್ನ ನಡೆಸಿದೆ. ಆದರೆ ಈ ಯುಪಿಎ ಸರಕಾರ, ಅದಕ್ಕೆ ಮೊದಲು ಎನ್.ಡಿ.ಎ ಸರಕಾರ ಮಾಡಿದಂತೆ ವಿದೇಶೀಯರು ಆಹಾರ ಧಾನ್ಯಗಳನ್ನು ಅಗ್ಗದರಗಳಲ್ಲಿ ನಮ್ಮ ದೇಶದ ಮಾರುಕಟ್ಟೆಯಲ್ಲಿ ಖರೀದಿಸಿ ನಂತರ ಸರಕಾರಕ್ಕೆ ಹೆಚ್ಚಿಸಿದ ದರಗಳಲ್ಲಿ ಮಾರಲು ಅವಕಾಶ ನೀಡಿದ್ದೇಕೆ, ರೇಶನ್ ವ್ಯವಸ್ಥೆ ಚೆನ್ನಾಗಿ ನಡೆಯುತ್ತಿದ್ದ ರಾಜ್ಯಗಳಿಗೂ ಕೋಟಾಗಳನ್ನು ತೀವ್ರವಾಗಿ ಕಡಿತ ಮಾಡಿದ್ದೇಕೆ, ಸಕ್ಕರೆಯನ್ನು ಕೆಜಿಗೆ 24 ರೂ.ಯಂತೆ ರಫ್ತು ಮಾಡಲು ಅವಕಾಶ ನೀಡಿದ್ದೇಕೆಎಂದು ಕೃಷಿಕೂಲಿಕಾರರ ಸಂಘ ಪ್ರಶ್ನಿಸಿದೆ.

ಬೆಲೆಯೇರಿಕೆಗೆ ಸರಿಯಾದ ಕಾರಣಗಳನ್ನು ವಿಶ್ಲೇಷಿಸದೆ ಅದನ್ನು ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕೂಡ ರಾಜ್ಯ ಸರಕಾರಗಳನ್ನು ದೂರುವುದು ಸರಿಯಲ್ಲ ಎಂದಿದೆ.; ಸಕ್ಕರೆ ಬೆಲೆ 50ರೂ. ದಾಟಿರುವಾಗ ದೊಡ್ಡ ವ್ಯಾಪಾರಸ್ಥರು 150ರಿಂದ 300ಶೇ. ವರೆಗೂ ಲಾಭ ಗಿಟ್ಟಿಸಿದ್ದಾರೆ ಎಂದು ಅದು ಸರಕಾರದ ಗಮನಕ್ಕೆ ತಂದಿದೆ. 20ರಿಂದ 30 ಲಕ್ಷ ಟನ್ ಆಹಾರ ಧಾನ್ಯಗಳನ್ನು ಬಹಿರಂಗ ಮಾರುಕಟ್ಟೆಗೆ ಬಿಡುವ ಬದಲು ಅದನ್ನು ರಾಜ್ಯ ಸರಕಾರಗಳಿಗೆ ಈ ಹಿಂದೆ ಕಡಿತ ಮಾಡಿದ ಕೋಟಾಗಳನ್ನು ತುಂಬಲು ಏಕೆ ಕೊಡಲಿಲ್ಲ ಎಂದೂ ಅದು ಪ್ರಶ್ನಿಸಿದೆ.

ಇಂತಹ ಟೀಕೆಗಳನ್ನು ಎದುರಿಸಿದ ಸರಕಾರ ಕಳೆದ ವಾರ ಎಲ್ಲಾ ಟಿಪಿಡಿಎಸ್ ಅಂದರೆ ಗುರಿ ನಿರ್ಧರಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕೊಡುವ 10 ಕೆ.ಜಿ. ಅಕ್ಕಿ ಅಥವಾ ಗೋಧಿಯನ್ನು ಹೆಚ್ಚುವರಿಯಾಗಿ ಕೊಡುವುದಾಗಿ ಪ್ರಕಟಿಸಿದೆ. ಆದರೆ ಇದು ರಾಜ್ಯಗಳ ಕೋಟಾದಲ್ಲಿ ಈ ಹಿಂದೆ ಮಾಡಿದ 73ಶೇ. ಕಡಿತವನ್ನು ತುಂಬಿಸುವುದಿಲ್ಲ. ಅಲ್ಲದೆ ಇದನ್ನು ಹೆಚ್ಚಿನ ಬೆಂಬಲ ಬೆಲೆಯಲ್ಲಿ ಕೊಡುವುದರಿಂದ ಬೆಲೆಯೇರಿಕೆಯ ಮೇಲೆ ಹತೋಟಿ ಹಾಕಲು ನೆರವಾಗುವುದೂ ಇಲ್ಲ. ಏಕೆಂದರೆ ಇದರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡದಾರರೂ ಮೂರು ಪಟ್ಟು ಹೆಚ್ಚು ಬೆಲೆ ತೆರಬೇಕಾಗುತ್ತದೆ. ಅಂದರೆ ಕೇಂದ್ರ ಸರಕಾರ ಈ ಹೆಚ್ಚುವರಿ ಧಾನ್ಯ ಹಂಚಿದ್ದೇನೆ ಎಂದು ಹೇಳಿಕೊಳ್ಳುವ ಕ್ರಮದ ಮೂಲಕ ವಾಸ್ತವವಾಗಿ ಬೆಲೆಯೇರಿಕೆಯನ್ನು ಪಡಿತರ ವ್ಯವಸ್ಥೆಯೊಳಗೂ ತಂದಂತಾಗಿದೆ.

ಈ ನಡುವೆ ಆಹಾರ ಪದಾರ್ಥಗಳ ಬೆಲೆಯೇರಿಕೆ ನಿಲ್ಲದೆ ಸಾಗಿದೆ. ಹಾಲಿನ ಬೆಲೆ ತೀವ್ರವಾಗಿ ಏರಲಿದೆ ಎಂದು ಸ್ವತಃ ಅಕಾರ ಮತ್ತು ಕೃಷಿ ಮಂತ್ರಿಗಳೇ ಹೇಳಿದ್ದಾರೆ.

ಬಿಎಸ್ಎನ್ ಎಲ್ ಮೊಬೈಲ್ ಜಾಲ ವಿಸ್ತರಣೆ ಮತ್ತೆ ಅಡ್ಡಿ

ಸಾರ್ವಜನಿಕ ವಲಯದ ಭಾರತ ಸಂಚಾರ ನಿಗಮ (ಬಿಎಸ್ಎನ್ಎಲ್) ತನ್ನ ಮೊಬೈಲ್ ವ್ಯಾಪ್ತಿಯನ್ನು ವಿಸ್ತರಿಸಲು ಮಾಡುತ್ತಿರುವ ಪ್ರಯತ್ನಗಳಿಗೆ ಮತ್ತೆ ಮತ್ತೆ ಅಡ್ಡಿ ತರಲಾಗುತ್ತಿದೆ. ಇದನ್ನು ತಪ್ಪಿಸಲು ಯುಪಿಎ-2 ಸರಕಾರ ಏನೂ ಮಾಡುತ್ತಿಲ್ಲ. ಇದರಿಂದಾಗಿ ಮೊಬೈಲ್ ಸೇವೆಯ ಮಾರುಕಟ್ಟೆಯಲ್ಲಿ ಅದರ ಪಾಲು ಕೇವಲ 16.8ಶೇ., ನಾಲ್ಕನೇ ಸ್ಥಾನ. ಸ್ಥಿರ ದೂರವಾಣಿಗಳೂ ಸೇರಿದರೆ ಮೂರನೇ ಸ್ಥಾನ. 2007ರಲ್ಲಿ 4.3ಕೋಟಿ ಮೊಬೈಲು ಲೈನುಗಳಿಗೆ ಟೆಂಡರ್ ಕರೆಯಬೇಕಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಗಳಿಂದಾಗಿ ಅದನ್ನು 22.5 ಲಕ್ಷಕ್ಕೆ ಇಳಿಸಲಾಯಿತು. ಅದನ್ನು ಕೂಡಾ ಜಾರಿಗೆ ತಂದದ್ದು ಬಿಎಸ್ಎನ್ಎಲ್ ನೌಕರರು ಮತ್ತು ಅಧಿಕಾರಿಗಳ ಜಂಟಿ ಮುಷ್ಕರದ ನಂತರವೇ. ಈಗ 9.3ಕೋಟಿ ಲೈನುಗಳಿಗೆ ಟೆಂಡರ್ ಕರೆಯುವುದನ್ನು ಕೂಡಾ ಬಿಎಸ್ಎನ್ಎಲ್ ಆಡಳಿತ ಮಂಡಳಿ ತಡೆಹಿಡಿದಿದೆ. ಮೊದಲು ನೊಕಿಯ ಸೀಮನ್ಸ್ ಕಂಪನಿಯ ಆಕ್ಷೇಪದಿಂದಾಗಿ ಇದು ಮುಂದೂಡಲ್ಪಟ್ಟಿತು. ಆಂಧ್ರ ಪ್ರದೇಶ ಹೈಕೋರ್ಟನ ತೀರ್ಪಿನಿಂದಾಗಿ ಈ ಆಕ್ಷೇಪ ಬುಡವಿಲ್ಲದ್ದು ಎಂದು ಕಂಡು ಬಂದ ಮೇಲೆ, ಈಗ ಕೇಂದ್ರೀಯ ಜಾಗೃತಾ ಆಯೋಗದ ವಿಚಾರಣೆಯ ನೆಪ ಹೂಡಿ ತಡೆ ಹಿಡಿಯಲಾಗಿದೆ. ಹೀಗಾದರೆ ಬಿಎಸ್ಎನ್ಎಲ್ ಸ್ಥಾನ ಇನ್ನೂ ಕೆಳಗಿಳಿದು ಸಂಪೂರ್ಣ ಖಾಸಗಿ ಯವರೇ ರಾರಾಜಿಸುವ ಪರಿಸ್ಥಿತಿ ಉಂಟಾಗಬಹುದು ಎಂದು ಬಿಎಸ್ಎನ್ಎಲ್ ನೌಕರರು ಮತ್ತು ಅಧಿಕಾರಿಗಳ ಜಂಟಿ ವೇದಿಕೆ ಈಗ ಹೋರಾಟ ಕ್ಕಿಳಿದಿದೆ. ಜನವರಿ 5ರಿಂದ ಬಿಎಸ್ಎನ್ಎಲ್ ಉಳಿಸುವ ಈ ಹೋರಾಟ ಆರಂಭವಾಗಿದೆ.

ಕೇಂದ್ರ ಸಂಪುಟದ ಕಿರಿಯ ಮಂತ್ರಿಗಳಿಗೆ ಕೆಲಸವಿಲ್ಲ !

ತಮಗೆ ಕೆಲಸ ಕೊಡುತ್ತಿಲ್ಲ, ಅಥವಾ ಸಂಪೂರ್ಣ ನಿರುದ್ಯೋಗವೇ- ಇದು ಕೇಂದ್ರ ಸಂಪುಟದ ಕಿರಿಯ ಮಂತ್ರಿಗಳ ದುಗುಡ. ಜನವರಿ 19ರಂದು ಅವರು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಇದನ್ನು ವ್ಯಕ್ತಪಡಿಸಿದರಂತೆ. ಕೆಂಪು ದೀಪ ಪ್ರದರ್ಶಿಸುವ ಅಚ್ಚ ಬಿಳಿ ಕಾರುಗಳಲ್ಲಿ ಓಡಾಡುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ ಎಂಬ ಅಹವಾಲನ್ನು ಕೇಳಿದ ಪ್ರಧಾನಿಗಳು ಈ ಬಗ್ಗೆ ಒಂದು ಟಿಪ್ಪಣಿ ತಯಾರಿಸುವಂತೆ ತಮ್ಮ ಸಂಪುಟ ಕಾರ್ಯದರ್ಶಿಗಳಿಗೆ ಹೇಳಿದ್ದಾರಂತೆ. ತಮ್ಮ ಇಲಾಖೆಗಳು ಕೊಡುವ ಪತ್ರಿಕಾ ಹೇಳಿಕೆಗಳೂ ತಮ್ಮ ಗಮನಕ್ಕೆ ಬರುತ್ತಿಲ್ಲ ಎಂದು ವಾಣಿಜ್ಯ ಇಲಖೆಯ ಕಿರಿಯ ಮಂತ್ರಿ ಜ್ಯೋತಿರಾದಿತ್ಯ ಸಿಂಧ್ಯಾ ದೂರು. ಆದರೆ ಇದು ಯುಪಿಎ-2 ಸರಕಾರದ ಹೊಸ ಸಮಸ್ಯೆಯೇನೂ ಅಲ್ಲ, ನರಸಿಂಹರಾಯರ ಮೊದಲ ಎಲ್‌ಪಿಜಿ ಸರಕಾರದಿಂದಲೇ ಆರಂಭವಾಗಿ ಎಡೆಬಿಡದೆ ಮುಂದುವರೆಯುತ್ತಿರುವ `ಕಾಯಿಲೆ' ಇದು ಎನ್ನಲಾಗುತ್ತಿದೆ.

ಎಲ್ಲಿಡುವುದು? ಏನು ಮಾಡುವುದು ?

ಗರಿಷ್ಠ ಪ್ರಮಾಣದ ಕೃಷಿ ಉತ್ಪಾದನೆ ಫಲವಾಗಿ ಮುಂದಿನ ಹಣಕಾಸು ವರ್ಷದಲ್ಲಿ ಆಹಾರ ಧಾನ್ಯಗಳ ಬೆಲೆಗಳು ಅಗ್ಗವಾಗಲಿವೆ ಅಂತ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಈಗ ಕಣಿ ಹೇಳುತ್ತಿದ್ದಾರೆ. ಇಲ್ಲಿಯವರೆಗೂ ಅವರು ಅಗೋ ಆಹಾರ ಧಾನ್ಯಗಳ ಮೇಲೆ ಈಗ ಇಳಿಯುತ್ತದೆ. ಆಗ ಇಳಿಯುತ್ತದೆ ಅಂತ ಆಕಾಶದತ್ತ ಕೈ ತೋರುತ್ತಿದ್ದರು. ಬೆಲೆ ಇಳಿಕೆಯ ಗಡವನ್ನು ಮುಂದಿನ ವರ್ಷಕ್ಕೆ ತಳ್ಳಿದ್ದಾರೆ ಸಚಿವರು. ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅಂತ ಅವರು ಭಾವಿಸಿರಬಹುದು.

ಮುಂದಿನ ವರ್ಷದ ಪರಿಸ್ಥಿತಿಯ ಕುರಿತು ಅವರು ಹೇಳಿರುವ ಮಾತನ್ನು ಕೇಳಿ ನಗಬೇಕೋ, ಅಳಬೇಕೋ ಒಂದೂ ಅರ್ಥವಾಲ್ದಂತಾಗಿದೆ. ``ಹೆಚ್ಚುವರಿ ಉತ್ಪಾದನೆಯಾಗುವ ಆಹಾರಧಾನ್ಯಗಳನ್ನು 2011, 12 ರಿಂದ ಏನು ಮಾಡಬೇಕು ಮತ್ತು ಎಲ್ಲಿ ಸಂಗ್ರಹಿಸಿ ಇಡಬೇಕು ಎನ್ನುವುದು ಸರ್ಕಾರಕೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಸಚಿವರು. ದೇಶದ ಬಹುಸಂಖ್ಯಾತ ತಾಯಂದಿರು - ಮಕ್ಕಳು ಅಪೌಷ್ಠಿಕತೆ, ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ನಮ್ಮ ಘನ ಸಚಿವರಿಗೆ ನೆನಪಿದ್ದಿದ್ದರೆ ಇಂತಹ ಮಾತು ಹೇಳುತ್ತಿರಲಿಲ್ಲವೇನೋ.`

 

ರಾಷ್ಟ್ರೀಯ ಆರೋಗ್ಯ ಸ್ಥಿತಿ ಕೆಡುತ್ತಿದೆ

ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ಪರಭಾರೆಯಾಗಲಾರದ ಹಕ್ಕು ಎಂಬುದನ್ನು ನಾವು ಮಾನ್ಯ ಮಾಡುತ್ತೇವೆ.. ವ್ಯಾಪಕ ಆರೋಗ್ಯ ಅಸಮಾನತೆಗಳು ಇರುವ ವರೆಗೆ ನಾವು ನಮ್ಮ ಆರ್ಥಿಕ ಯೋಜನೆಯಲ್ಲೂ ಎಲ್ಲಾ ನಾಗರಿಕರನ್ನು ಕುರಿತಂತೆ ನಮ್ಮ ನೈತಿಕ ಬಾಧ್ಯತೆಗಳಲ್ಲಿ ವಿಫಲವಾದಂತೆಯೇ' ಎಂದಿದ್ದರು ಯುಪಿಎ-1 ರ ಪ್ರಧಾನಿ 2005ರಲ್ಲಿ. ಅದೇ ಪ್ರಧಾನಿ ಕಳೆದ (63ನೇ) ಸ್ವಾತಂತ್ರ್ಯ ದಿನದಂದು `ಉತ್ತಮ ಆರೋಗ್ಯ ನಮ್ಮ ಮೂಲಭೂತ ಅಗತ್ಯಗಳಲ್ಲಿ ಒಂದು' ಎಂದು ಸಾರಿದರು. ಖಾಸಗಿ ವಲಯ ಈ ಅಗತ್ಯವನ್ನು ಪೂರೈಸಲಾಗದು ಎಂದೂ ಅವರು ಹೇಳಿದ್ದರು. ಆದರೆ ಇವೆಲ್ಲಾ ಕೇವಲ ಮಾತುಗಳಾಗಿಯೆ ಉಳಿದಿವೆ ಎಂಬ ಸಂಗತಿ ಈಗ ಮತ್ತೊಮ್ಮೆ ಬಯಲಾಗಿದೆ.

ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಹೆಚ್ಒ) ಇತ್ತೀಚೆಗೆ ಸಲ್ಲಿಸಿದ ವರದಿ ಪ್ರಕಾರ 2007-08ರಲ್ಲಿ ಭಾರತದ ಆರೋಗ್ಯ ವ್ಯವಸ್ಥೆ ಅತ್ಯಂತ ಖಾಸಗೀಕೃತ ಆರೋಗ್ಯ ವ್ಯವಸ್ಥೆಗಳಲ್ಲಿ ಒಂದು. ಆರೋಗ್ಯಕ್ಕೆ ಸರಕಾರ ಮಾಡುವ ಖರ್ಚಿನ ಪ್ರಮಾಣವನ್ನು ನೋಡಿದರೆ ಭಾರತದ ಸ್ಥಾನ 175 ದೇಶಗಳಲ್ಲಿ 171ನೇಯದ್ದು. ಜನಗಳ ಸರಾಸರಿ ಆದಾಯ ಉಚ್ಚ ಮಟ್ಟದಲ್ಲಿ ಇರುವ ಯುರೋಪಿನಲ್ಲೂ ಆರೋಗ್ಯ ವ್ಯವಸ್ಥೆಯಲ್ಲಿ ಸರಕಾರಗಳ ಪಾಲು 76ಶೇ. ನಮ್ಮ ಪಕ್ಕದ ದಕ್ಷಿಣ-ಪೂರ್ವ ಏಶ್ಯಾದಲ್ಲೂ 34ಶೇ. ಭಾರತದಲ್ಲಿ ಇದು ಕೇವಲ 3.4ಶೇ. ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಆರೋಗ್ಯಕ್ಕೆಂದು ಸರಕಾರ ಖರ್ಚು ಮಾಡುವುದು ಕೇವಲ 0.9ಶೇ. ಇದನ್ನು 3ಶೇ.ಕ್ಕೆ ಏರಿಸಬೇಕು ಎಂದು ಎಡಪಕ್ಷಗಳ ಒತ್ತಾಯದಿಂದಾಗಿ ಯುಪಿಎ-1 ರ ಸಾಮಾನ್ಯ ಕನಿಷ್ಟ ಕಾರ್ಯಕ್ರಮದಲ್ಲಿ ಹೆಳಲಾಗಿತ್ತು. ಯುಪಿಎ-2 ರ ಚುನಾವಣಾ ಪ್ರಣಾಳಿಕೆಯಲ್ಲೂ ಅದು ಇತ್ತು. ಆದರೆ ಅದಿನ್ನೂ 0.9ಶೇ. ದಾಟಿಲ್ಲ.

 

 

ಡೀಮ್ಡ್ ಯೂನಿರ್ಸಿಟಿ'ಗಳ ಹೆಸರಲ್ಲಿ ಶಿಕ್ಷಣದ ಅಧಿಕೃತ ವ್ಯಾಪಾರೀಕರ

ಇದನ್ನು ಯುಪಿಎ-2 ಸರಕಾರ ಈಗ ಭಾಗಶಃವಾದರೂ ಒಪ್ಪಿಕೊಂಡಿದೆ. ಕನಿಷ್ಟ 44 ಇಂತಹ `ವಿಶ್ವ ವಿದ್ಯಾಲಯ'ಗಳು ಶಿಕ್ಷಣವನ್ನು ಒಂದು ಲಾಭ ಗಿಟ್ಟಿಸುವ ಉದ್ದಿಮೆ ಮಾತ್ರವಾಗಿ ಕಾಣುತ್ತಿವೆ ಎಂದು ಸುಪ್ರಿಂ ಕೋರ್ಟನೆದುರು ಅದು ಒಪ್ಪಿಕೊಂಡಿದೆ. ಅದು ಮಾನ್ಯತೆ ರದ್ದು ಮಾಡಬೇಕೆಂದು ಶಿಫಾರಸು ಮಾಡಿರುವ ಈ `ವಿಶ್ವ ವಿದ್ಯಾಲಯ'ಗಳಲ್ಲಿ ಬಹಳಷ್ಟು ಆಸ್ತಿವ್ಯವಹಾರ ಮಾಡುವವರು ಮತ್ತು ಆಳುವ ರಾಜಕಾರಣಿಗಳ ಒಡೆತನದಲ್ಲಿರುವವುಗಳು ಎಂದು ಹೇಳಲಾಗಿದೆ.

ಸೌಜನ್ಯ: ಜನಶಕ್ತಿ

 

 

 


Share: