ಬೆಂಗಳೂರು,ಏ,೨೦:ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿಯ ಸಮಿಫೈನಲ್ಸ್ ಪಂದ್ಯಗಳನ್ನು ಮುಂಬೈಗೆ ಸ್ಧಳಾಂತರಿಸಿರುವ ವಿವಾದ ಇದೀಗ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಈ ತೀರ್ಮಾನವನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಸೆಮಿಫೈನಲ್ಸ್ ಪಂದ್ಯಗಳನ್ನು ಮುಂಬೈಗೆ ಸ್ಧಳಾಂತರಿಸಲು ಕಾರಣ ಏನು?. ಏಕಾಏಕಿ ಇಂತಹ ನಿರ್ಧಾರ ಕೈಗೊಳ್ಳುವ ಅಗತ್ಯವಿತ್ತೆ?. ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್ಸ್ ಪಂದ್ಯಗಳಿಗೆ ತಡೆನೀಡಬೇಕೆಂದು ವಕೀಲ ವಾಸುದೇವ್ ಎಂಬುವನ್ನು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಐಪಿಎಲ್ ಅಧ್ಯಕ್ಷರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸಿಬಿಐ, ಮತ್ತಿತರ ಸಂಸ್ಧೆಗಳನ್ನು ಅವರು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.
ಈ ಕುರಿತಾದ ಅರ್ಜಿ ನಾಳೆ ವಿಚಾರಣೆಗೆ ಬರಲಿದ್ದು, ಐಪಿಎಲ್ನಲ್ಲಿ ನಡೆಯುತ್ತಿರುವ ಅಕ್ರಮ ಬೆಟ್ಟಿಂಗ್ ದಂಧೆ, ಕಪ್ಪುಹಣದ ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸುವಂತೆ ಅರ್ಜಿದಾರರು ನ್ಯಾಯಪೀಠದ ಗಮನ ಸೆಳೆದಿದ್ದಾರೆ.