ಭಟ್ಕಳ: ತಾಲೂಕಿನ ಶಹರ ಭಾಗದ ಶರಾಬಿ ನದಿಗೆ ಹೊಂದಿಕೊಂಡಿರುವ ಡಾರಾಂಟಾ, ಡೊಂಗರಫಳ್ಳಿ ಭಾಗದಲ್ಲಿ ಚರಂಡಿಯ ನೀರು ಮುಂದಕ್ಕೆ ಹರಿಯದೇ ಕಲುಷಿತ ವಾತಾವರಣ ನಿರ್ಮಾಣಗೊಂಡಿದ್ದು, ಜನರು ರೋಗ ಭಯದಿಂದ ಕಂಗಾಲಾಗಿದ್ದಾರೆ.
ಭಟ್ಕಳ ತಾಲೂಕಿನ ಶಹರದ ಬಹುತೇಕ ಒಳಚರಂಡಿಯ ಸಂಪರ್ಕವನ್ನು ನೇರವಾಗಿ ನದಿಗೆ ನೀಡಲಾಗಿದ್ದು, ವರ್ಷದಿಂದ ವರ್ಷಕ್ಕೆ ಇಲ್ಲಿಯ ಪರಿಸ್ಥಿತಿ ಬಿಗಡಾಯಿಸಲಾರಂಭಿಸಿದೆ. ಈ ಭಾಗದ ನದಿಯಲ್ಲಿ ಕಲ್ಮಷ ತುಂಬಿಕೊಂಡು ಜನರು ನೀರಿಗೆ ಕಾಲಿಡಲು ಹಿಂಜರಿಯುತ್ತಿದ್ದಾರೆ. ಸುತ್ತಮುತ್ತಲಿನ ಬಾವಿಗಳಲ್ಲಿಯೂ ಕೊಳಕು ನೀರಿನ ಮಿಶ್ರಣವಾದ ಬಗ್ಗೆಯೂ ದೂರುಗಳು ಕೇಳಿ ಬಂದಿವೆ. ಅಕ್ಕಪಕ್ಕದ ರಸ್ತೆಗಳಲ್ಲಿ ಮೂಗು ಹಿಡಿದುಕೊಂಡೇ ತಿರುಗಾಡಬೇಕಾದ ಪರಿಸ್ಥಿತಿಯಿಂದ ಜನರು ಆತಂಕಕ್ಕೊಳಾಗಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಚರಂಡಿಯ ಕಲ್ಮಷ ನೀರು ನದಿಯ ಕಡೆಗೂ ಹರಿಯದೇ ಹಳ್ಳದಲ್ಲಿಯೇ ತುಂಬಿಕೊಂಡಿದ್ದು, ಅಸಂಖ್ಯಾತ ಸೊಳ್ಳೆಗಳ ಸೃಷ್ಟಿಗೆ ಕಾರಣವಾಗಿದೆ. ಈ ಭಾಗದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಸಮಸ್ಯೆಯನ್ನು ಸ್ಥಳೀಯ ಪುರಸಭೆಯ ಗಮನಕ್ಕೂ ತರಲಾಗಿದೆ. ಆದರೂ ಪರಿಹಾರ ಕಾಣದ ಜನರು ರೋಸಿ ಹೋಗಿದ್ದು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಶರಾಬಿ ನದಿಯ ಅಧೋಗತಿಯ ಬಗ್ಗೆ ಈ ಹಿಂದೆ ಮುಂಜಾವು ಸಚಿತ್ರ ಸವಿಸ್ತಾರ ವರದಿ ಮಾಡಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.
ತಂಜೀಮ್ ಮುಖಂಡರ ಭೇಟಿ: ಕಲ್ಮಷದ ಆಗರವಾಗಿರುವ ಡಾರಂಟಾ ಭಾಗಕ್ಕೆ ತಂಜೀಮ್ ಮುಖಂಡರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಿರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ನದಿಯ ಹೂಳೆತ್ತಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಂಜೀಮ್ ಅಧ್ಯಕ್ಷ ಸೈಯದ್ ಬದ್ರುಲ್ಲಾ ಹಸನ್ ಮೌಲೀಮ್, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಖಾಲೀದ್, ಕಾರ್ಯದರ್ಶಿ ಅಬ್ದುಲ್ ರಕೀಬ್ ಎಮ್.ಜೆ., ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ಎಫ್.ಕೆ.ಮೊಗೇರ, ನಜೀರ್ ಮುಂತಾದವರು ಉಪಸ್ಥಿತರಿದ್ದರು.