ಬೆಂಗಳೂರು, ನ.14: ಒಡೆದ ಮನೆಯಂತಾಗಿರುವ ಆಡಳಿತಾರೂಢ ಬಿಜೆಪಿ ಶಾಸಕರ ಮನಸ್ಸುಗಳನ್ನು ಒಗ್ಗೂಡಿಸುವ ಪ್ರಯತ್ನ ಬುಧವಾರದಿಂದ (ನ.೧೮) ಅಧಿಕೃತವಾಗಿ ಆರಂಭಗೊಳ್ಳಲಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಇತರ ವರಿಷ್ಠರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಒಳಗೊಂಡಂತೆ ಎಲ್ಲ ಸಚಿವರು ಹಾಗೂ ಶಾಸಕರಿಗೆ ಶಿಸ್ತಿನ ಪಾಠ ಹೇಳಿಕೊಡಲಿದ್ದಾರೆ.
ಇದಕ್ಕಾಗಿ ಬುಧವಾರ ಬೆಳಗ್ಗೆ ೧೧ ಗಂಟೆಗೆ ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮೂಲಕ ವೇದಿಕೆ ಸಿದ್ಧಪಡಿಸಿದ್ದು, ಮಧ್ಯಾಹ್ನದವರೆಗೆ ಪಾಠ ಪ್ರವಚನ ಮುಂದುವರಿಯಲಿದೆ.
ಯಡಿಯೂರಪ್ಪ ಹಾಗೂ ಗಣಿ ಧಣಿಗಳ ನಡುವೆ ದೆಹಲಿಯಲ್ಲಿ ಸಂಧಾನ ಮಾಡಿಸುವ ಸಂಬಂಧ ಒದ್ದಾಡಿ ಹೋಗಿರುವ ಬಿಜೆಪಿ ವರಿಷ್ಠರಿಗೆ ರಾಜ್ಯ ಘಟಕದಲ್ಲಾಗಿರುವ ಭಿನ್ನಮತ
ದಿಂದ ಪಕ್ಷ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಅಪರೂಪದ ಅವಕಾಶವನ್ನು ಕಳೆದುಕೊಳ್ಳಬಾರದು ಎಂಬ ನಿಲವಿನ ಜತೆಗೆ ಈ ಬಂಡಾಯ ಚಟುವಟಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬಂದಿರುವುದೂ ವರಿಷ್ಠರಿಗೆ ಮನವರಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಂದೆಡೆ ಕೂಡಿಸಿಕೊಂಡು ಮುಂದಿನ ಮೂರೂವರೆ ವರ್ಷಗಳ ಕಾಲ ಸರ್ಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗುವುದರ ಜತೆಗೆ
ಈಗಾಗಿರುವ ನಷ್ಟವನ್ನು ಹೇಗೆ ಭರಿಸಿಕೊಳ್ಳಬಹುದು ಎಂಬುದರ ಬಗ್ಗೆ ವರಿಷ್ಠರು ರಾಜ್ಯ ನಾಯಕರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಶೆಟ್ಟರ್ ಮಾತ್ರ ಪ್ರಮಾಣವಚನ: ಶಾಸಕಾಂಗ ಪಕ್ಷದ ಮುನ್ನಾದಿನವಾದ ಮಂಗಳವಾರ ಸಂಪುಟ ಪುನಾರಚನೆ ಬಹುತೇಕ ನಿಶ್ಚಿತವಾಗಿದ್ದು, ವಿಧಾನಸಭೆ ಅಧ್ಯಕ್ಷ ಜಗದೀಶ್ ಶೆಟ್ಟರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿಯಿಂದ ಶೆಟ್ಟರ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಬೆಂಬಲಿಗರನ್ನು ಬೆಂಗಳೂರಿಗೆ ಕರೆತರಲು ಖಾಸಗಿ ವಾಹನಗಳನ್ನು ಕಾದಿರಿಸುವ ಕೆಲಸ ಭರದಿಂದ ಸಾಗಿದೆ.
ಆದರೆ, ಶೆಟ್ಟರ್ ಮಾತ್ರ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆಯೇ ಅಥವಾ ಅವರೊಂದಿಗೆ ಇತರರೂ ಸೇರುತ್ತಾರೆಯೇ ಎಂಬುದು ಅಧಿಕೃತವಾಗಿ ಹೊರಬೀಳದೆ ಇದ್ದರೂ ಸದ್ಯದ ಮಾಹಿತಿ ಪ್ರಕಾರ ಶೆಟ್ಟರ್ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಾಗಿದೆ.
ಹಾಗೊಂದು ವೇಳೆ ಒಬ್ಬರೇ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರೆ ಮಾತ್ರ ಅವರೊಂದಿಗೆ ಮೈಸೂರಿನ ಎಸ್.ಎ. ರಾಮದಾಸ್ ಅಥವಾ ಬಸವನಬಾಗೇವಾಡಿಯ ಎಸ್.ಕೆ. ಬೆಳ್ಳುಬ್ಬಿ ಸಾಥ್ ನೀಡುವ ನಿರೀಕ್ಷೆಯಿದೆ.
ಈ ಪ್ರಕ್ರಿಯೆ ಎಲ್ಲ ಮುಗಿದು ಕೆಲವು ದಿನಗಳ ನಂತರ ಎರಡನೇ ಹಂತದ ಸಂಪುಟ ಪುನಾರಚನೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬೊಮ್ಮಾಯಿ ಮುಂದುವರಿಯುವರೇ?: ಶೆಟ್ಟರ್ ಅವರ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದಲೇ ಬಿಜೆಪಿಗೆ ಕರೆತಂದು ಜಲಸಂಪನ್ಮೂಲ ಸಚಿವರನ್ನಾಗಿ ಮಾಡಿರುವ ಬಸವರಾಜ ಬೊಮ್ಮಾಯಿ ತಲೆದಂಡ ಬಹುತೇಕ ಖಚಿತವಾಗಿದೆ. ಬೊಮ್ಮಾಯಿ ಅವರಿಗೆ ಕೊಕ್ ನೀಡಬೇಕು ಎಂಬ ಬೇಡಿಕೆಯನ್ನು ಶೆಟ್ಟರ್ ಸೇರಿದಂತೆ ಬಳ್ಳಾರಿ ಗಣಿ ಧಣಿಗಳೂ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿಟ್ಟಿರುವುದು ರಹಸ್ಯ ಸಂಗತಿಯೇನಲ್ಲ.
ಶೆಟ್ಟರ್ ಸಂಪುಟ ಸೇರ್ಪಡೆ ವೇಳೆಯೇ ಬೊಮ್ಮಾಯಿ ಅವರ ರಾಜೀನಾಮೆ ಪಡೆಯಬಹುದು. ಒಂದು ವೇಳೆ ಸಾಧ್ಯವಾಗದಿದ್ದರೆ ಮುಂದಿನ ಕೆಲವೇ ದಿನಗಳಲ್ಲಿ ಬೊಮ್ಮಾಯಿ ಸಂಪುಟದಿಂದ ಹೊರಗೆ ನಡೆಯಲೇಬೇಕಾಗುತ್ತದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಆದರೆ ಬೊಮ್ಮಾಯಿ ಜತೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ತಲೆದಂಡ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಜನ ಇನ್ನು ಹೊಸ ಯಡಿಯೂರಪ್ಪನ ನೋಡುವರು. ಹೊಸ ಬದಲಾವಣೆ ತರಲು ಹೊರಟಿದ್ದೇನೆ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ. ಸಚಿವರ ಎಚ್ಡಿಕೆ ಭೇಟಿ ಸುದ್ದಿ ಕೇವಲ ವದಂತಿ.
-ಯಡಿಯೂರಪ್ಪ
ಸೌಜನ್ಯ: ಕನ್ನಡಪ್ರಭ