ಭಟ್ಕಳ, ಅಕ್ಟೋಬರ್ 7: ಅಂಜುಮಾನ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಿರುವ ನೂತನ ಮಹಿಳಾ ಕಾಲೇಜಿನ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ನಗರದ ಹೋಟೆಲ್ ಕೋಲಾ ಪ್ಯಾರಾಡೈಸ್ ರಸ್ತೆಯಲ್ಲಿರುವ ಅಂಜುಮಾನ್ ಗಂಡುಮಕ್ಕಳ ಪ್ರೌಢಶಾಲಾ ಕಟ್ಟಡದ ಆವರಣದಲ್ಲಿ ನಿರ್ಮಿಸಲಾಗುವ ಈ ಕಟ್ಟಡವನ್ನು ಭಟ್ಕಳ ಎ.ಹೆಚ್.ಎಂ. ಅಧ್ಯಕ್ಷರಾದ ಎಸ್.ಎಂ ಸೈಯದ್ ಖಲೀಲುರ್ರಹ್ಮಾನ್ ರವರ ಸಹೋದರಿ ಫಾತಿಮಾ ಸಾಯ್ಬೀನ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭವು ನೋಶಾಬಾ ಸಮೀರಾ ದಾಮೂದಿಯವರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು. ನಾಸಿಹಾ ನಜ್‍ಹತ್ ತವರು ನಾತ್ ಒಂದನ್ನು ವಾಚಿಸಿದರು. ಅಂಜುಮಾನ್ ಮಹಿಳಾ ಕಾಲೇಜಿನೆ ಪ್ರಾಂಶುಪಾಲೆ ರಯೀಸಾ ಶೇಖ್ ರವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅಂಜುಮಾನ್ ಹೆಣ್ಣುಮಕ್ಕಳ ಪ್ರೌಢಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಹಾಗೂ ಅಲ್ ಕೌಸರ್ ಮಹಿಳೆಯರ ಇಸ್ಲಾಮಿಕ್ ಕಾಲೇಜಿನ ಪ್ರಾಂಶುಪಾಲೆಯಾದ ರಾಬಿಯಾ, ಜಮೀಯತುಸ್ ಸಲೀಹಾತ್ ಸಂಸ್ಥೆಯ ಪ್ರಾಂಶುಪಾಲೆ, ಹಲವು ಪ್ರೊಫೆಸರ್ ಹಾಗೂ ಅಧ್ಯಾಪಕವೃಂದದವರು ಉಪಸ್ಥಿತರಿದ್ದರು. ಉಸ್ವಾರವರ ವಂದನಾರ್ಪಣೆಯೊಂದಿಗೆ ಸರಳ ಸಮಾರಂಭ ಮುಕ್ತಾಯ ಕಂಡಿತು.
ನೂತನ ಕಟ್ಟಡ ಒಟ್ಟು ಆರು ಅಂತಸ್ತುಗಳನ್ನು ಹೊಂದಲಿದ್ದು ಈ ಕಟ್ಟಡ ನಿರ್ಮಾಣಕ್ಕಾಗಿ ಅಂಜುಮಾನ್ ಹಾಮಿ ಎ ಮುಸ್ಲಿಮೀನ್, ಭಟ್ಕಳ ಸಂಘಟನೆಯ ಅಧ್ಯಕ್ಷರಾದ ಜನಾಬ್ ಎಸ್.ಎಂ. ಸೈಯದ್ ಖಲೀಲುರ್ರಹ್ಮಾನ್ ರವರು 3.5 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಈ ಮೊತ್ತವನ್ನು ಕಟ್ಟಡದ ನೆಲ ಅಂತಸ್ತು ಹಾಗೂ ಪ್ರಥಮ ಅಂತಸ್ತುಗಳನ್ನು ನಿರ್ಮಿಸಲು ವಿನಿಯೋಗಿಸಲಾಗುವುದು.