ಕಾರವಾರ, ಅಕ್ಟೋಬರ್ 21: ದೇಶದ ಕರಾವಳಿಯ ಮೂಲಕ ಉಗ್ರರು ನುಗ್ಗುವ ಭೀತಿಯಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಎಲ್ಲಾ ರಕ್ಷಣಾ ಪಡೆಗಳು ನಿನ್ನೆ ಜಂಟಿಯಾಗಿ ಅಣಕು ಕಾರ್ಯಾಚರಣೆಯ ಮೂಲಕ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗುತ್ತಿವೆ.
ಬುಧವಾಗ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಪ್ರಾರಂಭವಾಗಿ ಗುರುವಾರ ಮುಂಜಾನೆ ಕಾರ್ಯಾಚರಣೆ ಕೊನೆಗೊಂಡಿದೆ. ವಿಶೇಷ ಕಾರ್ಯಾಚರಣೆಯಲ್ಲಿ ಉಗ್ರರ ಮಾರುವೇಶದಲ್ಲಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿಗಳು ಆಗಮಿಸಲಿದ್ದು ನೌಕಾಪಡೆ, ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್, ಕರ್ನಾಟಕ ರಾಜ್ಯ ಪೋಲೀಸ್ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಗ್ರರನ್ನು(ಮಾರುವೇಶದಲ್ಲಿರುವ ಅಧಿಕಾರಿಗಳನ್ನು) ಪತ್ತೆಹಚ್ಚಬೇಕಿದೆ.

ಈ ಕಾರ್ಯಕ್ರಮವನ್ನು ರಾಷ್ಟೀಯ ಭದ್ರತಾ ಇಲಾಖೆ ಆಯೋಜಿಸಿದ್ದು ಉಗ್ರರ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡ ಸೂಕ್ತ ಕ್ರಮವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಉಗ್ರರನ್ನು ಪತ್ತೆಹಚ್ಚುವುದು ಹಾಗೂ ಉಗ್ರರ ಬಗ್ಗೆ ಎಚ್ಚರಿಕೆಯಿಂದ ಇರುವುದು ಈ ಜಾಗೃತಿ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.
ಕಾರ್ಯಾಚರಣೆಯ ವಿವರ: ಮಾರುವೇಶದಲ್ಲಿರುವ ಹಿರಿಯ ಅಧಿಕಾರಿಗಳು ಯಾವುದೇ ವಾಹನ ಅಥವಾ ದೋಣಿಯ ಮೂಲಕ ನುಸುಳಲಿದ್ದು ಭದ್ರತಾ ಸಿಬ್ಬಂದಿ ಅದನ್ನು ಪತ್ತೆಹಚ್ಚಬೇಕಿದೆ. ಇದಕ್ಕಾಗಿ ಸೀಬರ್ಡ್ ನೆಲೆ ಕಾರ್ಯಪ್ರವೃತ್ತವಾಗಿದ್ದು ಒಂದು ಹೆಲಿಕಾಪ್ಟರ್, ಮೂರು ಅತ್ಯಾಧುನಿಕ ಯಾಂತ್ರಿಕ ದೋಣಿಗಳು ಗಸ್ತು ಆರಂಭಿಸಿವೆ. ಕೋಸ್ಟ್ ಗಾರ್ಡ್ ತನ್ನ ವೇಗದ ದೋಣಿಯ ಮೂಲಕ ಸಶಸ್ತ್ರ ಸಿಬ್ಬಂದಿಯೊಡನೆ ಕರಾವಳಿಯಲ್ಲಿ ಗಸ್ತು ನಡೆಸಿದೆ. ಕರಾವಳಿ ಕಾವಲು ಪಡೆ ಎರೆಡು ಸ್ಪೀಡ್ ಬೋಟ್ ಮತ್ತು ಸ್ಥಳೀಯ ಮೀನುಗಾರರ ದೋಣಿಗಳ ಮೂಲಕ ಸಮುದ್ರದಲ್ಲಿ ಗಸ್ತು ನಡೆಸಿವೆ.
ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯ ಉಗ್ರ ಕಾರ್ಯಾಚರಣೆಯಲ್ಲಿ ವಿಶೇಷ ತರಬೇತಿ ಪಡೆದ ಶಿವಮೊಗ್ಗದ ೮ ನೇ ಪಡೆಯ ೨೪ ಸಶಸ್ತ್ರ ಕಮಾಂಡೋಗಳು ಆಗಮಿಸಿದ್ದಾರೆ. ಆರ್.ಎಸ್.ಐ. ಡಿ.ಆರ್. ಶ್ರೀನಿವಾಸ್ ನೇತೃತ್ವದ ಈ ತಂಡ ಶಸ್ತ್ರಾಸ್ತ್ರ ಬಳಕಿ, ಉಗ್ರರ ವಿರುದ್ಧ ಹೋರಾಟ, ಗುಪ್ತಚರ ಮಾಹಿತಿ ರವಾನೆ ಸೇರಿದಂತೆ ಇಲ್ಲಾ ವಿಭಾಗಗಳಲ್ಲಿ ವಿಶೇಷ ತರಬೇತಿ ಪಡೆದಿದೆ. ಡಿ.ಐ.ಆರ್, ನಾಗರಿಕ ಪೋಲೀಸ್, ಅಪರಾಧ ಪತ್ತೆ ದಳ, ಗುಪ್ತಚರ ಇಲಾಖೆ ಸೇರಿದಂತೆ ಎಲ್ಲಾ ವಿಭಾಗಗಳ ಪೋಲೀಸರು ಉಗ್ರರ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊನ್ನಾವರದಿಂದ ದರಿಯಾ ದೌಲತ್ ಮತ್ತು ಸಲಾಮತ್ ಎಂಬ ಎರೆಡು ದೋಣಿಗಳ ಮೂಲಕ ಹತ್ತು ಜನ ಮೀನುಗಾರರೊಂದಿಗೆ ಪೋಲೀಸರು ಸಮುದ್ರದಲ್ಲಿ ಗಸ್ತು ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಛೇರಿ ಎದುರು ಸಶಸ್ತ್ರ ಪೋಲೀಸರು ಕಾವಲು ಕಾಯುತ್ತಿದ್ದಾರೆ. ಕಾರವಾರ, ಬೇಲೇಕೇರಿ, ತದಡಿ, ಹೊನ್ನಾವರ, ಭಟ್ಕಳ, ಮುರ್ಡೇಶ್ವರ ಬಂದರುಗಳಲ್ಲಿ ಸಶಸ್ತ್ರ ಪಡೆಗಳು ಕಾವಲು ನಡೆಸಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ನಡೆದಿದೆ. ಕಾರವಾರ ಸಮೀಪದ ಗ್ರಾಮೀಣ ಪ್ರದೇಶಗಳಲ್ಲಿಯೂ ಶಸ್ತ್ರಧಾರಿ ಪೋಲೀಸರು ತಪಾಸಣೆ ನಡೆಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಜನರು ಅತೀವ ಕುತೂಹಲ ತೋರುತ್ತಿದ್ದು ಹಲವರು ಆತಂಕಕ್ಕೊಳಗಾಗಿದ್ದಾರೆ. ನಿಜವಿಷಯವರಿಯದ ಹಲವರು ಪತ್ರಿಕಾ ಕಾರ್ಯಾಲಯಗಳಿಗೆ ದೂರವಾಣಿ ಮೂಲಕ ವಿಷಯ ಏನೆಂದು ವಿಚಾರಿಸುವುದು ಕಂಡುಬಂದಿದೆ.