ಬೆಂಗಳೂರು, ಎ.18: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡವಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ರವಿವಾರ ಸಂಜೆ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆಯೊಂದರ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಸರಕಾರದ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್, ಪೊಲೀಸ್ ಮಹಾನಿರ್ದೇಶಕ ಅಜಯಕುಮಾರ್ಸಿಂಗ್, ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ಬಿದರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬಾಂಬ್ ಸ್ಫೋಟದ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸ್ಫೋಟದಲ್ಲಿ ಉಗ್ರರ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದರು.ಐಪಿಎಲ್ನ ಸೆಮಿಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿರುವ ಕುರಿತು ಆಕ್ಷೇಪಿಸಿದ ಅವರು, ನಿನ್ನೆ ನಡೆದ ಪಂದ್ಯಕ್ಕೆ ಅಗತ್ಯ ಭದ್ರತೆ ಒದಗಿಸಲಾಗಿತ್ತು. ಅದರಂತೆ ಸೆಮಿಫೈನಲ್ ಪಂದ್ಯಕ್ಕೂ ಭದ್ರತೆ ನೀಡಲು ಸರಕಾರ ಸಿದ್ಧವಿದೆ ಎಂದರು.
ಪಂದ್ಯ ಸ್ಥಳಾಂತರಿಸಿರುವ ನಿರ್ಧಾರವನ್ನು ಮರುಪರಿ ಶೀಲಿಸಿ ಬೆಂಗಳೂರಿನಲ್ಲಿಯೇ ನಡೆಸುವಂತೆ ಐಪಿಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಭದ್ರತೆಗೆ ಸರಕಾರ ಹೆಚ್ಚು ಆದ್ಯತೆ ನೀಡಿದೆ. ಪಂದ್ಯ ಸ್ಥಳಾಂತರ ರಾಜ್ಯದ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ. ಶನಿವಾರದ ಘಟನೆಯ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗಳಿಗೆ ಯಾವುದೇ ಧಕ್ಕೆ ಇಲ್ಲ. ಸೂಕ್ತ ಭದ್ರತೆಗಾಗಿ ಪೊಲೀಸ್ ಇಲಾಖೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನೀಡಿರುವ ಕೆಲವು ತೀರ್ಪುಗಳ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗ ಮಾಹಿತಿ ಬಹಿರಂಗಪಡಿಸುವುದು ಅಪರಾಧ ವಾಗುತ್ತದೆ. ಆದ್ದರಿಂದ ಬಾಂಬ್ ಸ್ಫೋಟ ಕುರಿತು ಹೆಚ್ಚೇನು ಹೇಳಲು ಸಾಧ್ಯವಿಲ್ಲ ಎಂದು ಅಜಯ್ಕುಮಾರ್ ಸಿಂಗ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ರಾಜ್ಯದ ಆಂತರಿಕ ಭದ್ರತೆಗೆ ಪೊಲೀಸ್ ಇಲಾಖೆ ಸಮರ್ಥವಾಗಿದ್ದು, ಅಗತ್ಯ ಬಿದ್ದರೆ ಕೇಂದ್ರದ ನೆರವು ಪಡೆಯಲಾಗುವುದು ಎಂದು ಅವರು ತಿಳಿಸಿದರು.