ಬೆಂಗಳೂರು,ಏ,೨೦:ರಾಜ್ಯದ ನಗರ ಪ್ರದೇಶಗಳಲ್ಲಿ ಆಗಿದ್ದ ಕೆರೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಮುಂದುವರೆದಿದ್ದು, ಇಲ್ಲಿಯವರೆವಿಗೆ ೧೯೪ ಕೆರೆಗಳ ವ್ಯಾಪ್ತಿಯಲ್ಲಿ ೯೮೪ ಎಕರೆಯನ್ನು ತೆರವುಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ೬೭೭ ಕೆರೆಗಳಲ್ಲಿ ೩೨೪೨ ಎಕರೆ ಭೂಮಿ ಒತ್ತುವರಿಯಾಗಿದೆ. ಆದರೆ ಒತ್ತುವರಿ ತೆರವುಗೊಳಿಸುವಲ್ಲಿ ಜಿಲ್ಲಾಧಿಕಾರಿಗಳು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಒತ್ತುವರಿದಾರರ ಮೇಲೆ ಗೂಂಡಾಕಾಯ್ದೆಯಡಿ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಿದರೂ ಅದು ಅನುಷ್ಠಾವಾಗುತ್ತಿಲ್ಲ.
ಒತ್ತುವರಿ ತೆರವುಗೊಳಿಸುವ ಸಲುವಾಗಿ ಈ ಬಾರಿ ಬಜೆಟ್‌ನಲ್ಲಿ ೧೦ ಕೋಟಿ ರೂ ಹಣ ನಿಗದಿಪಡಿಸಲಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಒತ್ತುವರಿದಾರರಿಗೆ ಕಠಿಣ ಸಂದೇಶ ರವಾನಿಸಲಾಗುವುದು ಎಂದು ಹೇಳಿದರು.
ರಾಜ್ಯದ ೨೨೭೨ ಕೆರೆಗಳು, ಬಂದಾರಾ, ಹಳ್ಳಗಳನ್ನು ನಿರ್ಮಿಸಲು ನಿರ್ಧರಿಸಿದ್ದು, ಇದಕ್ಕಾಗಿ ಸೂಕ್ತ ಹಣಕಾಸಿನ ನೆರವು ನೀಡುವಂತೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಭಾಗಶ: ಸ್ಪಂದಿಸಿದೆ. ಈ ವರ್ಷ ಒಟ್ಟಾರೆ ೬೩,೧೩೨ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ.
ನಬಾರ್ಡ್‌ನಿಂದ ೨೦೨ ಕೋಟಿ ರೂ, ದೊರೆತಿದ್ದು, ಇದರಲ್ಲಿ ೪೩೬ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ತ್ವರಿತ ನೀರಾವರಿ ಯೋಜನೆಯಡಿ ೯೯ ಕಾಮಗಾರಿಗಳಿಗೆ ೧೨೧ ಕೋಟಿ ರೂ ಒದಗಿಸುವಂತೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ೪೮.೫೦ ಕೋಟಿ ರೂ ಬಿಡುಗಡೆಮಾಡಿದೆ ಎಂದು ಗೋವಿಂದ ಕಾರಜೋಳ ವಿವರಿಸಿದರು.