ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಮುಂದುವರೆದ ಮುಖ್ಯಮಂತ್ರಿ ಪಾದಯಾತ್ರೆ - ನೆರೆಪೀಡಿತರಿಗೆ ಹೆಚ್ಚಿನ ದೇಣಿಗೆ ಸಂಗ್ರಹ

ಬೆಂಗಳೂರು: ಮುಂದುವರೆದ ಮುಖ್ಯಮಂತ್ರಿ ಪಾದಯಾತ್ರೆ - ನೆರೆಪೀಡಿತರಿಗೆ ಹೆಚ್ಚಿನ ದೇಣಿಗೆ ಸಂಗ್ರಹ

Sat, 10 Oct 2009 03:09:00  Office Staff   S.O. News Service
ಬೆಂಗಳೂರು ಅ.9: ಉತ್ತರ ಕರ್ನಾಟಕ ಭಾಗದಲ್ಲಿ ಸಂಭವಿಸಿರುವ ನೆರೆ ಹಾವಳಿಯಿಂದ ತೊಂದರೆಗೊಳಗಾದವರಿಗೆ ಪುನರ್ವಸತಿ ಕಲ್ಪಿಸಲು ಮುಖ್ಯಮಂತ್ರಿ ಇಂದು ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸಿ ದೇಣಿಗೆ ಸಂಗ್ರಹಿಸಿದರು.

ಮೂರನೆ ದಿನದ ಮುಖ್ಯಮಂತ್ರಿಯವರ ಪಾದಯಾತ್ರೆ ಬೆಂಗಳೂರಿನ ಆರ್.ಟಿ.ನಗರ, ಹೆಬ್ಬಾಳ, ಮಲ್ಲೇಶ್ವರಂ, ಯಶವಂತಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯಿತು. ಆರ್.ಟಿ.ನಗರದ ವಿನಾಯಕ ದೇವೇಸ್ಥಾನವೊಂದರಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಆರಂಭಿಸಿದ ಮುಖ್ಯಮಂತ್ರಿಗೆ ಜನತೆ ಉತ್ತಮವಾಗಿ ಸ್ಪಂದಿಸಿದರು. ಲಾರಿ ಮಾಲಕರ ಸಂಘ ೫ ಲಕ್ಷ ರೂಪಾಯಿ ನೀಡಿದೆ. ಲಾರಿ ಮಾಲಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಮುಖ್ಯಮಂತ್ರಿಯವರ ತೂಕದಷ್ಟು ನಾಣ್ಯಗಳನ್ನು ಪರಿಹಾರ ನಿಧಿಗೆ ದೇಣಿಗೆಯಾಗಿದೆ ನೀಡಿದ್ದಾರೆ. ಆರ್.ಟಿ.ನಗರ, ಗಂಗಾನಗರದ ವರ್ತಕರು ಮತ್ತು ಸಾರ್ವಜನಿಕರು ಸುಮಾರು ೬೦೦ ಮೂಟೆ ಅಕ್ಕಿಯನ್ನು ದೇಣಿಗೆಯಾಗಿ ನೀಡಿದರು.

 ಆದಿಚುಂಚನಗಿರಿಯ ಮಠದಿಂದ ಸುಮಾರು ಐದು ಸಾವಿರ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಬಾಲಗಂಗಾಧರ ನಾಥ ಸ್ವಾಮಿಜಿ ತಿಳಿಸಿದ್ದಾರೆ. 

ಸಾರಿಗೆ ಸಚಿವ ಆರ್.ಅಶೋಕ್ ತಮ್ಮ ಒಂದು ವರ್ಷದ ವೇತನ ೫ ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ವಿಧಾನ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಮೂಲಕ ೩೦ ಸಾವಿರ ರೂಪಾಯಿಗಳನ್ನು ವೈಯಕ್ತಿಕವಾಗಿ ದೇಣಿಗೆ ನೀಡುವುದಾಗಿ ಅವರು ತಿಳಿಸಿದರು.

ಆರ್.ಟಿ.ನಗರದ ಫ್ಲಾರೆನ್ಸ್ ಶಾಲೆ, ಪಬ್ಲಿಕ್ ಶಾಲೆ, ಸರಕಾರಿ ಶಾಲೆಯ ಮಕ್ಕಳು ಮುಖ್ಯಮಂತ್ರಿ ಸಾಗಿಹೋಗುವ ಹಾದಿಯ ಇಕ್ಕೇಲಗಳಲ್ಲಿ ನಿಂತು ದೇಣಿಗೆ ನೀಡಿದರು.

ನೆರೆ ಸಂತ್ರಸ್ಥರಿಗಾಗಿ ಸಾರ್ವಜನಿಕ ವಲಯದಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಅನುದಾನ ರಹಿತ ಪಾಲಿಟೆಕ್ನಿಕ್ ಕಾಲೇಜುಗಳ ಸಿಬ್ಬಂದಿ ಒಂದು ದಿನದ ವೇತನ ನೀಡಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಪಿ.ಇ.ಎಸ್.ಶಿಕ್ಷಣ ಸಂಸ್ಥೆ ಗ್ರಾಮವೊಂದನ್ನು ದತ್ತು ಪಡೆದು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದೆ. ಸಂಸ್ತೆಯ ಸಿಬ್ಬಂದಿಗಳ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ.

ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಸಾವಿರ ಮನೆಗಳನ್ನು ನಿಮಿಸಿಕೊಡುವ ಭರವಸೆ ದೊರೆತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ೫ ಕೋಟಿ ರೂಪಾಯಿ ಭರವಸೆ ದೊರೆತಿದೆ. ಅರಸೀಕೆರೆಯ ಸ್ವಾಮೀಜಿ ೨ ಲಕ್ಷ ರೂಪಾಯಿ, ಪುಷ್ಪಗಿರಿ ಸ್ವಾಮಿಜಿ ಒಂದು ಲಕ್ಷ ದೇಣಿಗೆ ನೀಡಿದ್ದಾರೆ.

ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಆರ್.ಜಯರಾಂ ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ ಕಾಮೆಡ್-ಕೆಯಿಂದ ೫೦ ಲಕ್ಷ ರೂಪಾಯಿಗಳ ದೇಣಿಗೆ ನೀಡಿದರು.

ಕೆ.ಎ.ಎಸ್.ಅಧಿಕಾರಿಗಳ ಐದು ತಿಂಗಳ ವರೆಗೆ ಪ್ರತಿ ತಿಂಗಳ ಎರಡು ದಿನಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ಕೆ.ಎ.ಎಸ್.ಅಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಆರ್.ವೇಂಕಟೇಶ್ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಲ್ಲೂರು ಪ್ರಸಾದ್ ತಮ್ಮ ಒಂದು ತಿಂಗಳ ವೇತನವನ್ನು ಮತ್ತು ಸಿಬ್ಬಂದಿಗಳ ಒಂದು ದಿನದ ವೇತನವನ್ನು ಒಟ್ಟುಗೂಡಿಸಿ ೨ ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ

Share: