ಧಾರವಾಡ,ಏ,೨೦: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೧೦-೧೧ನೇ ಸಾಲಿನ ಶಿಷ್ಯವೇತನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ, ಹಿಂದುಸ್ತಾನಿ ಹಾಗೂ ಸುಗಮ ಸಂಗೀತ, ಶಾಸ್ತ್ರೀಯ ನೃತ್ಯ, ಕಥಾಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ೧೬ ರಿಂದ ೨೪ ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.೪೦೦೦/- ಗಳ ಶಿಷ್ಯವೇತನ ನೀಡಲಾಗುವುದು.
ಅರ್ಜಿಗಳನ್ನು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಅರ್ಜಿಯ ಜೊತೆ ಇತ್ತೀಚಿನ ಪಠ್ಯಕ್ರಮವನ್ನು ನೀಡಲಾಗಿದೆ. ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಛಿಸುವವರು ರೂ. ೧೦/ ಸ್ಟ್ಯಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ, ಕನ್ನಡ ಭವನ, ೨ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-೫೬೦ ೦೦೨ ಇಲ್ಲಿಗೆ ಮೇ ೨೦ರೊಳಗಾಗಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂ.೦೮೦-೨೨೨೧೫೦೭೨ ಸಂಪರ್ಕಿಸಹುದೆಂದು ರಿಜಿಸ್ಟ್ರಾರ್ ಬಲವಂತರಾವ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ:ಮೊದಲ ದಿನ ೮೨ ನಾಮಪತ್ರ ಸಲ್ಲಿಕೆ ; ಶ್ರೀ ಬಿ. ಶಿವಪ್ಪ
ಬಳ್ಳಾರಿ. ಏ.೧೯ (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಏಪ್ರಿಲ್ ೧೯ ರಂದು ೮೨ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ೧೮೬ ಗ್ರಾಮ ಪಂಚಾಯತ್‌ಗಳ ಒಟ್ಟು ೩೩೭೩ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ೮೨ ನಾಮಪತ್ರಗಳು ಸಲ್ಲಿಕೆಯಾಗಿದೆ. ಅವುಗಳಲ್ಲಿ ೨೮ ನಾಮಪತ್ರಗಳು ಮಹಿಳಾ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿವೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ೧೭ ನಾಮಪತ್ರಗಳು ಅವುಗಳಲ್ಲಿ ೮ ನಾಮಪತ್ರಗಳು ಮಹಿಳೆಯರಿಂದ ನಾಮಪತ್ರ ಸಲ್ಲಿಕೆಯಾಗಿವೆ. ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ೨೧ ( ಮಹಿಳೆ ೬) ಹಿಂದುಳಿದ ಅ ವರ್ಗದ ಅಭ್ಯರ್ಥಿಗಳಿಂದ ೧೨ ನಾಮಪತ್ರಗಳು ( ಮಹಿಳೆ ೪) ಹಿಂದುಳಿದ ಬಿ ವರ್ಗದ ಅಭ್ಯರ್ಥಿಗಳಿಂದ ೨ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ೩೦ ( ಮಹಿಳೆ ೧೦ ) ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಾವಂತ ಮಕ್ಕಳಿಂದ ಅರ್ಜಿ ಆಹ್ವಾನ
ಬಳ್ಳಾರಿ. ಏ.೧೯ (ಕರ್ನಾಟಕ ವಾರ್ತೆ): ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ೧೫ ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀ ವಿ.ಎನ್. ಮೇಟಿ ಅವರು ತಿಳಿಸಿದ್ದಾರೆ.
ದಿನಾಂಕ ೧.೧.೧೯೯೫ ರ ನಂತರ ಜನಿಸಿದವರಾಗಿದ್ದು, ಈ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದಿರಬೇಕು. ಆಸಕ್ತ ಅರ್ಹರು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಳ್ಳಾರಿ ಇವರಿಂದ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಏಪ್ರಿಲ್ ೩೦ ರೊಳಗೆ ಇದೇ ಕಚೇರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಬಳ್ಳಾರಿ. ಏ.೧೯ (ಕರ್ನಾಟಕ ವಾರ್ತೆ): ಬುದ್ದಿ ಮಾಂದ್ಯರು, ಬಹುವಿಧ ಅಂಗವಿಕಲರು, ಆಟಿಸಂ ಮತ್ತು ಸೆಲೆಬ್ರಲ್ ಪಾಲ್ಟಿ ಅಂಗವಿಕಲತೆ ಹೊಂದಿರುವ ಮಕ್ಕಳ, ವ್ಯಕ್ತಿಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ, ಈ ಕ್ಷೇತ್ರದಲ್ಲಿ ಕಾರ್‍ಯನಿರ್ವಹಿಸುತ್ತಿರುವ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಲೋಕಲ್ ಲೆವೆಲ್ ( ಸ್ಥಳೀಯ ಮಟ್ಟದ) ಸಮಿತಿ ಸದಸ್ಯತ್ವ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಸೇವಾ ನಿಕೇತನ ಆವರಣ, ದೇವಿನಗರ, ಬಳ್ಳಾರಿ ಇವರಿಗೆ ಏಪ್ರಿಲ್ ೩೦ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೨೬೭೮೮೬ ಅನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀ ಅಮರನಾಥ ಅವರು ತಿಳಿಸಿದ್ದಾರೆ.
ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನ
ಬಳ್ಳಾರಿ. ಏ.೧೯ (ಕರ್ನಾಟಕ ವಾರ್ತೆ): ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು ಹೊಲಿಗೆ ತರಬೇತಿ ನಿಡಲು ಬಳ್ಳಾರಿ ತಾಲ್ಲೂಕಿನ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ವರ್ಗದ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲ್ಲೂಕ ಪಂಚಾಯತ್ ಕಾರ್‍ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳು ೩೫ ವರ್ಷದೊಳಗಿನವರಾಗಿದ್ದು, ವಾರ್ಷಿಕ ವರಮಾನ ೧೫,೦೦೦ ಅನ್ನು ಮೀರಿರಬಾರದು. ಕನಿಷ್ಟ ೭ ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಆಸಕ್ತರು ತಾಲ್ಲೂಕ ಪಂಚಾಯತ್ ಕಾರ್‍ಯಾಲಯದಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಏಪ್ರಿಲ್ ೨೫ ರೊಳಗೆ ಇದೇ ಕಚೇರಿಗೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.