ಹಾಸನ, ಮಾ.೧೬- ಜಾಗತೀಕ ತಾಪಮಾನ ಎಂದರೆ ಇದೇ ಇರಬೇಕು. ಬಿಸಿಲ ತಾಪಮಾನ ದಿನೇದಿನೇ ಏರ ತೊಡಗಿದೆ. ಧಗೆಯಿಂದ ಪಾರಾಗಲು ಜನತೆ ತಂಪು ಪಾನೀಯಗಳ ಮರೆ ಹೋಗುತ್ತಿದ್ದಾರೆ. ಈ ನಡುವೆ ತಂಪು ಪಾನೀಯಗಳ ಬೆಲೆ ಬಿಸಿಲ ತಾಪವನ್ನೂ ಮೀರಿಸುವಷ್ಟು ಏರಿಕೆಯಾಗಿದೆ.
ಅರೆಮಲೆನಾಡು ಖ್ಯಾತಿಯ ಹಾಸನ ಜಿಲ್ಲೆಗೆ ಇನ್ನೊಂದು ಹೆಸರು ಬಡವರ ಊಟಿ. ಆದರೆ ಇತ್ತೀಚಿನ ದಿನಗಳಲ್ಲಿ ಬಡವರ ಊಟಿಯಲ್ಲೂ ಬಿಸಿಲ ತಾಪ ಹೆಚ್ಚುತ್ತಿದೆ. ಬೆಳಿಗ್ಗೆ ೧೧ ದಾಟಿತೆಂದರೆ ಭಾಸ್ಕರನ ತಾಪ ಅಧಿಕಗೊಳ್ಳುತ್ತದೆ. ಕ್ಷಣಕಾಲವೂ ಬಿಸಿಲಿನಲ್ಲಿ ನಿಲ್ಲಲು ಸಾಧ್ಯವಾಗಷ್ಟು ಧಗೆ ಕಾಡುತ್ತಿದೆ. ಹಿಂದೆಂದೂ ದಾಖಲಾದಷ್ಟು ಅಧಿಕ ಉಷ್ಟಾಂಶ ಈ ಬಾರಿ ಹಾಸನದಲ್ಲಿ ದಾಖಲಾಗಿದೆ. ದಾರಿ ಕಾಣದ ಜನತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಹಾಸನ ನಗರದಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಭರ್ಜರಿಯಿಂದ ನಡೆಯುತ್ತಿದೆ. ಪ್ರತಿ ಕಲ್ಲಂಗಡಿ ಹಣ್ಣಿಗೆ ೫೦ ರಿಂದ ೧೦೦ ತೆತ್ತಬೇಕಿದೆ. ಆದರೂ ಜನತೆ ಅದನ್ನು ಲೆಕ್ಕಿಸುತ್ತಿಲ್ಲ. ಈ ನಡುವೆ ಬೆಲೆ ಏರಿಕೆಯ ಬಿಸಿ ಬಿಸಿಲ ತಾಪಕ್ಕೂ ಅಧಿಕವಾಗಿದೆ.
ತಂಪು ಪಾನೀಯಗಳ ಬೆಲೆ ದುಪಟ್ಟಾಗಿದೆ. ಐಸ್‌ಕ್ರೀಮ್‌ಗಳ ಬೆಲೆ ಕೂಡ ಹೆಚ್ಚಾಗಿದೆ. ಆದರೂ ವಿಧಿ ಇಲ್ಲದೆ ಜನತೆ ತಂಪು ಪಾನೀಯ ಮೊರೆ ಹೋಗಬೇಕಾಗಿದೆ.
ಅರಣ್ಯ ನಾಶದೊಂದಿಗೆ ಪರಿಸರವನ್ನು ಹಾಳು ಮಾಡುತ್ತಿರುವುದರ ಪರಿಣಾಮ ತಾಪಮಾನ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಿದೆ. ಇದು ಇದೇ ರೀತಿ ಮುಂದುವರೆದರೆ ಮನುಕುಲ ಅಪಾಯಕ್ಕೆ ಸಿಲುಕುವ ಕಾಲ ದೂರವಿಲ್ಲ ಎಂಬುದು ಪ್ರಜ್ಞಾವಂತರ ಅಭಿಮತ. ಒಟ್ಟಾರೆ ಬಡವರ ಊಟಿಯಲ್ಲಿ ಬಿಸಿಲ ಧಗೆಗೆ ಸಿಲುಕಿ ಜನತೆ ಬಸವಳಿಯುತ್ತಿದ್ದಾರೆ.