ಭಟ್ಕಳ, ಫೆಬ್ರವರಿ ೨೨: ನಾವು ನಮ್ಮ ಯುವ ಪೀಳಿಗೆಗೆ ಪರಿಸರ ಕಾಳಜಿಯನ್ನು ಕಲಿಸಬೇಕು ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ ಹೇಳಿದರು ಅವರು ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನ ಸಭಾಂಗಣದಲ್ಲಿ ಎರ್ಪಡಿಸಲಾಗಿದ್ದ ಪ್ರಕೃತಿ ಸಿಂಚನ ಕಾರ್ಯಕ್ರಮದ ಅಡಿಯಲ್ಲಿ "ವಿದ್ಯಾರ್ಥಿ ಜಾಗೃತಿ ವಿಚಾರ ಸಂಕಿರಣ" ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ನಾವಿನ್ನೂ ನಾಗರೀಕ ಸಮಾಜದಲ್ಲಿ ಬಹಳ ಹಿಂದೆ ಇದ್ದೇವೆ. ನಮ್ಮಲ್ಲಿ ಸಾರ್ವಜನಿಕ ಜಾಗೃತಿ ಕಡಿಮೆಯಿರುವುದರಿಂದಲೇ ನಾವು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚವಾಗಿಟ್ಟುಕೊಳ್ಳುತ್ತಿಲ್ಲ, ವಿದೇಶದಲ್ಲಿ ನಾವು ಎಲ್ಲಿಯೂ ಸಾರ್ವಜನಿಕವಾಗಿ ಉಗುಳುವುದನ್ನು, ಕಸ ಬೇಕಾಬಿಟ್ಟಿಯಾಗಿ ಹಾಕುವುದನ್ನು ನೋಡಲಾರೆವು ಎಂದರು. ಪರಿಸರ ರಕ್ಷಣೆಗೆ ನಾವು ಪ್ರತಿಜ್ಞೆ ಮಾಡಬೇಕಾಗಿದೆ ಎಂದ ಅವರು ವಿದ್ಯಾರ್ಥಿದಿಶೆಯಲ್ಲಿಯೇ ನಾವು ಪರಿಸರ ಜಗೃತಿಯ ಕುರಿತು ಅವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದೂ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಹಾಸ ಹೆಗಡೆ ಮಾತನಾಡಿ ಉತ್ತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದ್ದು ೬೦೦ ಅಂತಹ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಪ್ರತಿಯೋರ್ವರೂ ತಮ್ಮ ತಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದ ಅವರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪರಿಸರ ಸ್ವಚ್ಚತೆಯ ಕುರಿತು ಜಾಗೃತಿ ಉಂಟುಮಾಡುವುದು ಅವಶ್ಯಕ ಎಂದರು. ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರವಾಸಿ ತಾಣಗಳ ಜನ ಜೀವನ, ಪ್ರಾಮುಖ್ಯತೆಯ ಕುರಿತು ಅಧ್ಯಯನ ಮಾಡಲು ಮುಂದಿನ ದಿನಗಳಲ್ಲಿ ಅಣಿಗೊಳಿಸಲಾಗುವುದು ಎಂದೂ ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ಪತ್ರಕರ್ತರ ಮಂಡಳಿಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಭಟ್ಟ ಮಾತನಾಡಿ ಪರಿಸರ ಸ್ವಚ್ಚತೆಗೆ ಪ್ರತಿಯೋರ್ವರ ಮನ ಪರಿವರ್ತನೆಯೊಂದೇ ಮಾರ್ಗವಾಗಿದೆ. ನಾವು ನಮ್ಮ ನಮ್ಮ ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ಮತ್ತೊಬ್ಬರಿಗೆ ಮಾದರಿಯಾದಾಗ ಮಾತ್ರ ಈ ದಿಶೆಯಲ್ಲಿ ಕಾರ್ಯೋನ್ಮುಖರಾಗಲು ಸಾಧ್ಯವಾಗುವುದು ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಪರಿಜ್ಞಾನಾಶ್ರಮ ಎಂ.ಇಡಿ. ಕಾಲೇಜಿನ ಪ್ರಾಂಶುಪಾಲ ಡಾ. ಅಜಾತಸ್ವಾಮಿ ಮಾತನಾಡಿ ಜೀವನ ಮೌಲ್ಯಗಳನ್ನು ಗುರುತಿಸಿ ತಮ್ಮದಾಗಿಸಿಕೊಳ್ಳುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾದಾಗ ಮಾತ್ರ ಹೊಸ ಹೊಸ ವಿಚಾರಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯ ಎಂದರು.
ಶ್ರೀ ಜ್ಞಾನೇಶ್ವರಿ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲ ವಿ.ಜಿ.ಹೆಗಡೆ ಮಾತನಾಡಿ ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ವೇದಿಕೆಯಲ್ಲಿ ಬಿ.ಬಿ.ಎ. ಮತ್ತು ಬಿ.ಬಿ.ಎಂ. ಕಾಲೇಜಿನ ನಾಗೇಶ ಭಟ್ಟ ಉಪಸ್ಥಿತರಿದ್ದರು.
ಇದಕ್ಕೂ ಪೂರ್ವ ಸುಮಾರು ಒಂದೂವರೆ ತಾಸುಗಳ ಕಾಲ ನಮ್ಮ ಪ್ರವಾಸಿ ತಾಣಗಳ ಮಹತ್ವ ಹಾಗೂ ನಮ್ಮ ನಡವಳಿಕೆ ಎನ್ನುವ ವಿಷಯದ ಕುರಿತು ವಿಚಾರ ಮಂಡಿಸಿದ ಪರಿಸರ ಪತ್ರಕರ್ತ ಶಿವಾನಂದ ಕಳವೆ ಅವರು ಸಭಾಂಗಣದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಮಂತ್ರಮುಗ್ದರನ್ನಾಗಿಸಿದರು.
ಉಪನ್ಯಾಸಕ ಡಿ.ವಿ. ಪ್ರಕಾಶ ಅವರು ಸ್ವಾಗತಿಸಿದರು. ರಾಮಚಂದ್ರ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನುಭಾಗ್ ವಂದಿಸಿದರು.