ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಟೀಕೆಗಳಿಗೆ ತಲೆಕೆಡಿಸಿಕೊಳ್ಳುವ ಬದಲು ಅಭಿವೃದ್ಧಿಯೆಡೆಗೆ ಗಮನ - ಯಡಿಯೂರಪ್ಪ

ಬೆಂಗಳೂರು: ಟೀಕೆಗಳಿಗೆ ತಲೆಕೆಡಿಸಿಕೊಳ್ಳುವ ಬದಲು ಅಭಿವೃದ್ಧಿಯೆಡೆಗೆ ಗಮನ - ಯಡಿಯೂರಪ್ಪ

Sun, 25 Apr 2010 02:42:00  Office Staff   S.O. News Service

ಬೆಂಗಳೂರು,ಏ,೨೪-ಗ್ರಾಮಪಂಚಾಯ್ತಿ ಚುನಾವಣೆಗಳಲ್ಲಿ ಸೋಲುವ ದುಸ್ವಪ್ನ ಕಂಡು ಕಂಗಾಲಾಗಿರುವ ಪ್ರತಿಪಕ್ಷಗಳು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿವೆ ಎಂದು ವ್ಯಂಗ್ಯವಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಇಂತಹ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವ ಬದಲು ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸುವುದಾಗಿ ಹೇಳಿದ್ದಾರೆ.

 

ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರ ಜತೆ ಮಾತನಾಡಿದ ಅವರು,ಬಿಬಿ‌ಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಪ್ರತಿಪಕ್ಷಗಳು ಕಂಗಾಲಾಗಿದ್ದು ಬೇಜಾವಾಬ್ದಾರಿಯಿಂದ ಮಾತನಾಡುತ್ತಿವೆ ಎಂದರು.

 

 

ಗ್ರಾಮಪಂಚಾಯ್ತಿ ಚುನಾವಣೆ ರಾಜಕೀಯದಿಂದ ದೂರವಿರಬೇಕು.ಆದರೆ ಬಿಜೆಪಿ ಅಲ್ಲೂ ಕೇಸರಿಕರಣ ಮಾಡಲು ಹೊರಟಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು,ಈ ಹಿಂದೆ ನಡೆದ ಚುನಾವಣೆಗಳ ಸಂಧರ್ಭದಲ್ಲಿ ಇವರು ರಾಜಕೀಯ ಮಾಡಿರಲಿಲ್ಲವೇ?ಎಂದು ಪ್ರಶ್ನಿಸಿದರು.

 

ಚುನಾವಣೆ ಚಿಹ್ನೆಯನ್ನು ಬಳಸದೇ ನಡೆಯಲಿ,ಅಥವಾ ಚಿಹ್ಮೆಯನ್ನು ಬಳಸಿ ನಡೆಯಲಿ.ಅದು ರಾಜಕೀಯವಾಗಿ ಎಲ್ಲಾ ಪಕ್ಷಗಳಿಗೂ ಮುಖ್ಯವೇ.ಎಲ್ಲರೂ ಗೆಲ್ಲುವುದಕ್ಕೋಸ್ಕರವೇ ಪ್ರಯತ್ನ ಮಾಡುವುದು ಎಂದು ನುಡಿದರು.

 

 

ನಾವು ವಿಜಯಸಂಕಲ್ಪ ಯಾತ್ರೆ ಮಾಡುತ್ತಿರುವುದು ನಿಜ.ಆದರೆ ಇವರೇನು ರಾಜ್ಯದಾದ್ಯಂತ ತಿರುಗುತ್ತಿಲ್ಲವೇ?ಎಂದು ಪ್ರಶ್ನಿಸಿದ ಅವರು,ಚುನಾವಣೆ ಅಂಧ ಮೇಲೆ ಗೆಲ್ಲುವುದಕ್ಕಾಗಿ ಹೋರಾಡಲೇಬೇಕು,ನಾವೂ ಹೋರಾಡುತ್ತಿದ್ದೇವೆ ಎಂದು ವಿವರಿಸಿದರು.

 

 

ಯಡಿಯೂರಪ್ಪ-ಈಶ್ವರಪ್ಪ ಹಕ್ಕ ಬುಕ್ಕ ಇದ್ದಂತೆ,ಸಾಧನೆ ಮಾಡದೇ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬ ಸಿದ್ಧರಾಮಯ್ಯ ಟೀಕೆಗೆ ಪ್ರತಿ ಟೀಕೆ ಮಾಡಿದ ಅವರು,ಇವತ್ತು ಕಾಂಗ್ರೆಸ್ ಪಕ್ಷದವರು ನಮಗೆ ಬುದ್ದಿ ಹೇಳುತ್ತಿದ್ದಾರೆ.ಆದರೆ ಅವರ ಪಕ್ಷದ ಕಛೇರಿ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಅಂಗಿ ಅಂಗಿ ಹರಿದುಕೊಂಡು ಹೊಡೆದಾಡುತ್ತಿದ್ದಾರೆ.ಮೊದಲು ತಮ್ಮ ಪಕ್ಷವನ್ನು ಸರಿಪಡಿಸಿಕೊಳ್ಳಲಿ.ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಹೇಳಿದರು.

 

 

ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಲಾಗದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಿರಿ ಎಂಬ ಸಿದ್ದರಾಮಯ್ಯ ಅವರ ಟೀಕೆ ಬಗ್ಗೆ ಕೇಳಿದಾಗ:ಬೇಜವಾಬ್ದಾರಿಯಿಂದ ಮಾತನಾಡುವುದು ದೇವೇಗೌಡರ ಕುಟುಂಬದ ಜಾಯಮಾನ ಮಾತ್ರ ಎಂದುಕೊಂಡಿದ್ದೆ.ಆದರೆ ಸಿದ್ದರಾಮಯ್ಯ ಕೂಡಾ ಅವರ ಹಾದಿಯನ್ನೇ ಹಿಡಿದಿದ್ದಾರೆ ಎಂದರು.

 

ವಿದ್ಯುತ್‌ನ ಪರಿಸ್ಥಿತಿ ಏನು?ಎಂಬ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತು.ಹೀಗಾಗಿ ನಾನು ಅದರ ಬಗ್ಗೆ ಹೆಚ್ಚು ಹೇಳಬೇಕಿಲ್ಲ.ಹಿರಿಯ ನಾಯಕರಾಗಿ ಸಿದ್ಧರಾಮಯ್ಯ ಅವರಿಗೆ ಈ ವಿಷಯ ಗೊತ್ತಿಲ್ಲದಿರುವುದು ವಿಷಾದನೀಯ ಎಂದರು.

 

 

ಆಶ್ರಯ ಯೋಜನೆಯನ್ನು ಬಿಜೆಪಿ ಸರ್ಕಾರ ಸರಿಯಾಗಿ ಜಾರಿಗೆ ತರುತ್ತಿಲ್ಲ.ಹೀಗಾಗಿ ಇದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಜೀ ಮುಖ್ಯಮಂತ್ರಿ ಧರ್ಮಸಿಂಗ್ ಮಾಡಿರುವ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿ,ಅವರ ಕಾಲದಲ್ಲಿ ಎಷ್ಟು ಮನೆ ಕಟ್ಟಿದರೋ?ಅದಕ್ಕಿಂತ ಹೆಚ್ಚು ಮನೆಗಳನ್ನು ನಾವು ಕಟ್ಟದ್ದೇವೆ ಎಂದು ಹೇಳಿದರು.

 

ಬೆಂಗಳೂರನ್ನು ಹಸಿರು ನಗರವನ್ನಾಗಿ ಪರಿವರ್ತಿಸುವುದು ಸರ್ಕಾರದ ಗುರಿ ಎಂದ ಅವರು,ಇದೇ ಕಾರಣದಿಂದ ಐದು ಲಕ್ಷ ಸಸಿಗಳನ್ನು ನೆಡುವ ಕೆಲಸ ಮಾಡಲಿದ್ದೇವೆ ಎಂದು ನುಡಿದರು.

 

ಪಂಚಾಯ್ತಿ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ರೂಪಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೆ ಇಂದು ಪ್ರಶಸ್ತಿ ಪ್ರಧಾನ ಮಾಡಿದ್ದು ಈ ಸಾಧನೆ ಮಾಡಿದ್ದರಿಂದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವರಿಗೆ ಅಭಿನಂದನೆ ಹೇಳುವುದಾಗಿ ನುಡಿದರು.

 


Share: