ಮಂಗಳೂರು, ಏಪ್ರಿಲ್ ೧೫:(ಕರ್ನಾಟಕ ವಾರ್ತೆ)- ಮಹತ್ವದ ಭಾರತ ಜನಗಣತಿ-೨೦೧೧ಕ್ಕೆ ಸುರತ್ಕಲ್ನಲ್ಲಿ ಮೇಯರ್ ರಜನಿ ದುಗ್ಗಣ್ಣ ಅವರ ಮನೆಯಿಂದ ಇಂದು ಚಾಲನೆ ದೊರೆತಿದ್ದು, ಎರಡು ಹಂತಗಳಲ್ಲಿ ಜನಗಣತಿ ಕಾರ್ಯಕ್ರಮ ನಡೆಯಲಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ವಿಜಯಪ್ರಕಾಶ್ ಅವರು ಹೇಳಿದರು.
ಏಳನೆ ಜನಗಣತಿಗೆ ನಗರದ ಪ್ರಥಮ ಪ್ರಜೆ ತಮ್ಮ ಕುಟುಂಬದ, ಮನೆಯ ಸಮಗ್ರ ಮಾಹಿತಿಯನ್ನು ಗಣತಿದಾರರಿಗೆ ನೀಡಿದರು. ಮನೆಗಣತಿ ಕಾರ್ಯ ಜೂನ್ ೧ರವರೆಗೆ ನಡೆಯಲಿದ್ದು, ಮನೆಗಳ ಬಗ್ಗೆ, ಈ ಸಂಬಂಧ ಎಲ್ಲ ಮಾಹಿತಿಗಳ ಬಗ್ಗೆ ಪ್ರತಿ ಮನೆಗೆ ಭೇಟಿ ನೀಡುವ ಜನಗಣತಿ ಅಧಿಕಾರಿಗಳು ಜೂನ್ ಒಂದರೊಳಗೆ ಮನೆಗಣತಿ ಕಾರ್ಯವನ್ನು ಸಂಪೂರ್ಣಗೊಳಿಸಲಿದ್ದಾರೆ ಎಂದು ಅವರು ತಿಳಿಸಿದರು.
೧೮೭೨ರಿಂದ ಭಾರತದ ಜನಗಣತಿಯು ಜನಸಂಖ್ಯೆ, ಆರ್ಥಿಕ ಚಟುವಟಿಕೆ, ಸಾಕ್ಷರತೆ, ವಸತಿ, ನಾಗರೀಕ ಸೌಲಭ್ಯಗಳು, ಸ್ವತ್ತುಗಳು ಮತ್ತು ವೈವಿಧ್ಯಮಯ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಬಗ್ಗೆ ಸಮಗ್ರ ಮತ್ತು ಪೂರ್ವಾಗ್ರಹ ಪೀಡಿತವಲ್ಲದ ಮಾಹಿತಿ ಮೂಲವಾಗಿದ್ದು, ದೇಶದಲ್ಲಿ ಈಗಾಗಲೇ ಆಗಿರುವ ಅಭಿವೃದ್ಧಿಯ ಮೌಲ್ಯಮಾಪನ ಕೈಗೊಳ್ಳಲು, ಸಾಧಿಸುತ್ತಿರುವ ಪ್ರಗತಿಯನ್ನು ಅಳೆಯಲು ಭವಿಷ್ಯದಲ್ಲಿ ಯೋಜನೆ ರೂಪಿಸಲು ಅಗತ್ಯವಾಗಿದ್ದು, ಗಣತಿದಾರರು ಮನೆಗೆ ಬರುವಾಗ ಸೂಕ್ತ ಮಾಹಿತಿ ನೀಡಲು ಅವರು ಕೋರಿದ್ದಾರೆ.
ಜನಗಣತಿಯ ಜೊತೆಯಲ್ಲಿ ಮೊಟ್ಟ ಮೊದಲಬಾರಿಗೆ ಸಾಮಾನ್ಯ ನಿವಾಸಿಗಳ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ನ್ನು ತಯಾರಿಸಲಾಗುತ್ತಿದ್ದು, ರಾಷ್ಟ್ರೀಯ ಯೋಜನೆಗಳನ್ನು ಗುರಿ ತಲುಪಿಸಲು ಇದು ಸಹಾಯಕವಾಗಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆಯ ಕಂದಾಯ ಅಧಿಕಾರಿ ಹಾಗೂ ನಗರ ಪಾಲಿಕೆ ವ್ಯಾಪ್ತಿಯ ನೋಡಲ್ ಅಧಿಕಾರಿ ಶ್ರೀಮತಿ ಮೇಘನಾ, ಜನಗಣತಿ ಅಧಿಕಾರಿ ದಿವಾಕರ್, ಅವರು ಉಪಸ್ಥಿತರಿದ್ದರು.
ಶಿಸ್ತು ಕ್ರಮ: ಮಹಾನಗರಪಾಲಿಕೆಗೆ ಆಸ್ತಿತೆರಿಗೆ ಪಾವತಿಸದೆ ಬಾಕಿ ಇರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಭಾರತ ಜನಗಣತಿ ೨೦೧೧- ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ
(ಕರ್ನಾಟಕ ವಾರ್ತೆ)- ಭಾರತ ಜನಗಣತಿ ೨೦೧೧ರ ಪ್ರಯುಕ್ತ ಪ್ರಥಮ ಹಂತದಲ್ಲಿ ಮನೆಪಟ್ಟಿ ತಯಾರಿ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ತಯಾರಿ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯಕ್ರಮ ಏಪ್ರಿಲ್ ೧೫ರಿಂದ ಜೂನ್ ೧ರವರೆಗೆ ನಡೆಯಲಿದ್ದು, ಪ್ರತೀ ಗಣತಿದಾರರ ಬ್ಲಾಕಿಗೆ ನೇಮಕಗೊಂಡ ಗಣತಿದಾರರು ಮನೆ ಮನೆ ಭೇಟಿ ನೀಡಿದಾಗ ಸಾರ್ವಜನಿಕರು ಸ್ಪಷ್ಟ ಮಾಹಿತಿ ನೀಡಬೇಕೆಂದು ಜಿಲ್ಲೆಯ ಪ್ರಧಾನ ಜನಗಣತಿ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ತಿಳಿಸಿದ್ದಾರೆ.
ಗಣತಿದಾರರು ಅವರಿಗೆ ವಹಿಸಲಾದ ವಲಯಕ್ಕೆ ಭೇಟಿ ನೀಡದಿದ್ದಲ್ಲಿ, ಗಣತಿ ಕಾರ್ಯದ ಸಂದರ್ಭದಲ್ಲಿ ಕೆಲವು ಮನೆಗಳನ್ನು ಗಣತಿ ಮಾಡದೆ ಬಿಟ್ಟಲ್ಲಿ, ಸಾರ್ವಜನಿಕರಿಂದ ಸಮಗ್ರ ಮಾಹಿತಿ ಪಡೆದು ದಾಖಲಿಸದಿದ್ದಲ್ಲಿ, ಜನಗಣತಿ ಸಿಬ್ಬಂದಿಗೆ ಪಾವತಿ ಮಾಡಬೇಕಾದ ಸಂಭಾವನೆ ಪಾವತಿಸದಿದ್ದಲ್ಲಿ ಮತ್ತು ಗಣತಿ ಕಾರ್ಯದ ಸಮಯದಲ್ಲಿ ಮೇಲ್ವಿಚಾರಕರು ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಸಾರ್ವಜನಿಕರು ಹಾಗೂ ಜನಗಣತಿ ಸಿಬ್ಬಂದಿಗಳು ದೂರು ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಕೇಂದ್ರದ ನಂಬರ್ ೧೦೭೭. ಈ ಸಹಾಯವಾಣಿಯ ಸದುಪಯೋಗವನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.