ಬೆಂಗಳೂರು, ಫೆಬ್ರವರಿ 1:ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇಪ್ಪತ್ತು ಸಾವಿರ ಕೋಟಿ ರೂಗಳ ಟೆಂಡರ್ ಕಾಮಗಾರಿಯಲ್ಲಿ ಹಣ ಲೂಟಿ ಹೊಡೆಯುವ ಉದ್ದೇಶದಿಂದಲೇ ಬಿಬಿಎಂಪಿ ಚುನಾವಣೆಯನ್ನು ಮುಂದೂಡಿಸಲು ಪಿತೂರಿ ಮಾಡಿದೆ ಎಂದು ಆರೋಪಿಸಿರುವ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ,ರೇವಣ್ಣ,ಚುನಾವಣೆ ಮುಂದೆ ಹೋಗುವಂತೆ ಮಾಡುವಲ್ಲಿ ಚುನಾವಣಾ ಆಯೋಗವೂ ಷಾಮೀಲಾಗಿದೆ ಎಂದು ದೂರಿದ್ದಾರೆ.
ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಮುಂದಿನ ಒಂದು ವರ್ಷದಲ್ಲಿ ಬಿಬಿಎಂಪಿ ವತಿಯಿಂದ ಇಪ್ಪತ್ತು ಸಾವಿರ ಕೋಟಿ ರೂಗಳ ಕಾಮಗಾರಿಗಳು ನಡೆಯಲಿದ್ದು ಇದಕ್ಕೆ ಸಂಬಂಧಿಸಿದಂತೆ ಯಾವ್ಯಾವ ಗುತ್ತಿಗೆದಾರರಿಗೆ ಟೆಂಡರ್ ನೀಡಬೇಕು ಎಂಬುದು ಅದಾಗಲೇ ತೀರ್ಮಾನವಾಗಿದೆ ಎಂದು ನುಡಿದರು.
ಈ ಎಲ್ಲ ಟೆಂಡರ್‌ಗಳನ್ನು ಹೊರರಾಜ್ಯದ ಗುತ್ತಿಗೆದಾರರಿಗೆ ನೀಡಿ ಕೋಟ್ಯಾಂತರ ರೂ ಲೂಟಿ ಹೊಡೆಯಬೇಕು ಎಂಬುದು ಯಡಿಯೂರಪ್ಪ ಸರ್ಕಾರದ ಲೆಕ್ಕಾಚಾರ ಎಂದ ಅವರು,ಜನಪ್ರತಿನಿಧಿಗಳು ಬಂದರೆ ಈ ಕೆಲಸ ಸಾಧ್ಯವಿಲ್ಲ ಎಂಬ ಕಾರಣದಿಂದಲೇ ಚುನಾವಣೆ ಮುಂದೆ ಹೋಗುವಂತೆ ಮಾಡಲಾಗಿದೆ ಎಂದು ಹೇಳಿದರು.
ಇದೇ ಕಾರಣಕ್ಕಾಗಿ ವಾರ್ಡ್‌ವಾರು ಮೀಸಲಾತಿಯನ್ನು ಬೇಕು ಬೇಕೆಂದೇ ತಪ್ಪಾಗಿ ಮಾಡಿಸಲಾಗಿದೆ.ನಂತರ ಸುಪ್ರೀಂಕೋರ್ಟ್‌ನಲ್ಲಿ ಇದರ ವಿರುದ್ಧ ಅರ್ಜಿ ಹಾಕಿಸಲಾಗಿದೆ.ಹೀಗೆ ಅರ್ಜಿ ಹಾಕಿದವರು ಸಾಮಾನ್ಯರಾದರೂ ಅವರ ಪರವಾಗಿ ಶಾಂತಿಭೂಷಣ್ ತರದ ದುಬಾರಿ ಶುಲ್ಕ ಪಡೆಯುವ ನ್ಯಾಯವಾದಿಗಳು ವಾದ ಮಾಡಿರುವುದನ್ನು ನೋಡಿದರೆ ಇದರ ಹಿಂದೆ ಯಾರಿದ್ದರು ಎಂಬುದು ಸಾಬೀತಾಗುತ್ತದೆ ಎಂದು ಹೇಳಿದರು.
ಜುಲೈ ತಿಂಗಳಲ್ಲಿ ವಾರ್ಡ್‌ವಾರು ಮೀಸಲಾತಿ ಮಾಡುವ ಸಂಬಂಧ ರೂಪಿಸಿದ ಅಧಿಸೂಚನೆಯನ್ನು ಬದಲಿಸಿ ಬೇಕು ಬೇಕಾದ ಹಾಗೆ ಮಾಡಿದ ಸರ್ಕಾರ ಇದಕ್ಕಾಗಿ ಅಧಿಕಾರಿಗಳನ್ನು ಹೆದರಿಸಿತ್ತು ಎಂದೂ ಅವರು ಆರೋಪಿಸಿದರು.
ಹೀಗೆ ತಾನೇ ತಪ್ಪು ಮಾಡಿ ನ್ಯಾಯಾಲಯದಲ್ಲಿ ಅದು ಪ್ರಶ್ನೆಯಾಗುವಂತೆ ಮಾಡಿದ ಸರ್ಕಾರ ಅಂತಿಮವಾಗಿ ಚುನಾವಣೆಯನ್ನು ಮುಂದೂಡುವ ರೀತಿ ನೋಡಿಕೊಂಡಿದೆ.ಸಧ್ಯದ ಪರಿಸ್ಥಿತಿ ನೋಡಿದರೆ ಇನ್ನೂ ಆರು ತಿಂಗಳು ಅಥವಾ ಒಂದು ವರ್ಷ ಕಾಲ ಚುನಾವಣೆ ನಡೆಯುವ ಸಾಧ್ಯತೆಯೇ ಇಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.
ಈ ಎಲ್ಲದರ ಮಧ್ಯೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ಸಂಧರ್ಭದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ನಂತರ ಚುನಾವಣಾ ಆಯೋಗ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಏನು ಹೇಳುತ್ತದೆ ಎಂಬುದನ್ನು ಗಮನಿಸಬೇಕಿತ್ತು.
ಆದರೆ ಅದು ಈ ಕೆಲಸ ಮಾಡದೇ ಚುನಾವಣಾ ಪ್ರಕ್ರಿಯೆಯನ್ನು ರದ್ದು ಮಾಡಿದೆ ಎಂದು ಟೀಕಿಸಿದ ಅವರು,ಚುನಾವಣೆ ಮುಂದೆ ಹೋಗುವಲ್ಲಿ ಆಯೋಗವೂ ಷಾಮೀಲಾಗಿದೆ.ಹೀಗಾಗಿ ಇದರ ನೈತಿಕ ಹೊಣೆ ಹೊತ್ತು ರಾಜ್ಯದ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ರೀತಿ ವಾರ್ಡ್‌ವಾರು ಮೀಸಲಾತಿಯನ್ನು ತಪ್ಪಾಗಿ ಮಾಡಿದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳನ್ನು ಕಿತ್ತು ಹಾಕಬೇಕಾಗುತ್ತದೆ ಎಂದು ರೇವಣ್ಣ ಆಗ್ರಹಿಸಿದರು.
ಇಡೀ ಪ್ರಕ್ರಿಯೆಯಲ್ಲಿ ಸರ್ಕಾರದ ಅಡ್ವೋಕೇಟ್ ಜನರಲ್ ಅವರು ತಪ್ಪು ಮಾಹಿತಿ ನೀಡಿ ನ್ಯಾಯಾಲಯದ ಹಾದಿ ತಪ್ಪಿಸಿದ್ದಾರೆ ಎಂದ ಅವರು,ಇಂತಹ ಕೆಲಸಗಳಲ್ಲಿ ಅವರು ನಂಬರ್ ಒನ್ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಸರ್ಕಾರಕ್ಕೆ ತಾಖತ್ತಿದ್ದರೆ ತಕ್ಷಣವೇ ವಾರ್ಡ್‌ವಾರು ಮೀಸಲಾತಿಯನ್ನು ಸರಿಪಡಿಸಿ ಚುನಾವಣೆ ನಡೆಸುವುದಾಗಿ ನ್ಯಾಯಾಲಯಕ್ಕೆ ಹೇಳಲಿ.ಅದನ್ನು ಬಿಟ್ಟು ಆಕ್ರಮವಾಗಿ ಟೆಂಡರ್ ಧಂದೆಗೆ ಇಳಿಯಲು ಮುಂದಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.