ಭಟ್ಕಳ: ನಗರದ ಬಂದರ್ ರಸ್ತೆಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪಾರ್ಕ್ ಹಿಂಭಾಗದ ಹಸನ್ ಬಾಪಾ ಎಂಬುವರಿಗೆ ಸೇರಿದ ಅಕ್ರಮ ಕಾಂಪೌಂಡ್ ಗೋಡೆಯನ್ನು ಭಟ್ಕಳ ಮುನಿಸಿಪಾಲಿಟಿ ಸ್ಥಳೀಯರ ನೆರವಿನೊಂದಿಗೆ ಕೆಡವಿದೆ.
ಅಸರಕೇರಿ ಹಾಗೂ ಸೋನಾರಕೇರಿಯ ಸ್ಥಳೀಯರ ಪ್ರಕಾರ ಈ ಕಾಂಪೌಂಡ್ ಗೋಡೆ ಅಕ್ರಮವಾಗಿ ಕಟ್ಟಲಾಗಿದ್ದು ರಸ್ತೆಯೊಂದರ ಭಾಗವನ್ನು ಕಬಳಿಸಿತ್ತು. ಈ ಕಾರಣವಾಗಿ ರಸ್ತೆ ಮುಚ್ಚಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಈ ಕಾಂಪೌಂಡ್ ಗೋಡೆಯನ್ನು ಕೆಡವುವಂತೆ ಸಾರ್ವಜನಿಕರು ಭಟ್ಕಳ ಮುನಿಸಿಪಾಲಿಟಿಯ ಅಧಿಕಾರಿಗಳಲ್ಲಿ ಇತ್ತೀಚೆಗೆ ಮನವಿ ಮಾಡಿಕೊಂಡಿದ್ದರು.

ದೂರನ್ನು ಕೂಲಂಕಶವಾಗಿ ಪರಿಶೀಲಿಸಿದ ಮುನಿಸಿಪಾಲಿಟಿಯ ಅಸರಕೇರಿ ವಿಭಾಗದ ಅಧಿಕಾರಿ ಕೃಷ್ಣ ನಾಯಕ್ ಹಾಗೂ ಇನ್ನಿತರ ಸ್ಥಳೀಯ ನಾಯಕರಾದ ಸಚಿನ್ ಮಹಾಳೆ, ಜಗದೀಶ್ ಅಣ್ಣಪ್ಪ ನಾಯಕ್, ಮನಮೋಹನ ನಾಯಕ್, ನಾಗರಾಜ ಪೂಜಾರಿ, ಮಂಜುನಾಥ ನಾಯಕ್, ವೆಂಕಟೇಶ ಮೊಗೇರ, ಅಣ್ಣಪ್ಪ ನಾಯಕ್ ಪಾಂಡು ನಾಯಕ್ ಮತ್ತಿತರರ ಉಪಸ್ಥಿತಿಯಲ್ಲಿ ಕಾಂಪೌಂಡ್ ಗೋಡೆಯನ್ನು ಕೆಡವಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಹಸನ್ ಬಾಪಾ ರವರು ಈ ಭೂಮಿ ತನಗೆ ಸೇರಿದ್ದೆಂದೂ, ಅದಕ್ಕೆ ಅರ್ಹವಾದ ಕಾಗದಪತ್ರಗಳೂ ತನ್ನಲ್ಲಿದೆಯೆಂದು ತಿಳಿಸಿದರು.
ಈ ಪತ್ರಗಳನ್ನು ಪರಿಶೀಲಿಸಿದ ಭಟ್ಕಳ ಮುನಿಸಿಪಾಲಿಟಿಯ ಅಧ್ಯಕ್ಷ ಪರ್ವೇಜ್ ಕಾಶಿಂಜೀಯವರು ಈ ಭೂಮಿ ಕಾಗದಪತ್ರಗಳ ಪ್ರಕಾರ ಹಸನ್ ಬಾಪಾರಿಗೆ ಸೇರಿದ್ದಾದರೂ ಕಾಂಪೌಂಡ್ ಗೋಡೆ ಕಟ್ಟಲು ಅನುಮತಿ ನೀಡಲಾಗಿಲ್ಲ ಎಂದು ತಿಳಿಸಿದರು. ಆ ಕಾರಣ ರಸ್ತೆಯ ಭಾಗವನ್ನು ನುಂಗಿಹಾಕಿದ ಕಾಂಪೌಂಡ್ ಗೋಡೆಯನ್ನು ಕೆಡವಲಾಗಿದೆ ಎಂದು ತಿಳಿಸಿದರು.
ಚಿತ್ರ, ವರದಿ: ಮೊಹಮ್ಮದ್ ಅಬುಹುರೈರಾ ಅಕ್ರಮಿ, ಭಟ್ಕಳ