ಬೆಂಗಳೂರು, ಜನವರಿ 13:ಸಿದ್ಧರಾಮಯ್ಯ ಯಾವ ಜಾತಿಯಲ್ಲಿ ಹುಟ್ಟಿದ್ದಾರೋ ನಾನೂ ಅದೇ ಜಾತಿಯಲ್ಲಿ ಹುಟ್ಟಿದ್ದೇನೆ. ಅವರು ಖೈಮಾ ಉಂಡೆ ತಿನ್ನುತ್ತಾರೆ,ನಾನೂ ಖೈಮಾ ಉಂಡೆ ತಿನ್ನುತ್ತೇನೆ. ಇನ್ನೊಂದು ಸಲ ಅವರೇನಾದರೂ ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸುತ್ತೇನೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಗುಡುಗಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ನನ್ನನ್ನು ಈಡಿಯೆಟ್ ಎಂದು ಬೈದಿದ್ದಾರೆ.ಅವರಿಗೆ ಯಾವ ಭಾಷೆ ಗೊತ್ತೋ?ನನಗೂ ಅದೇ ಭಾಷೆ ಗೊತ್ತು.ಇನ್ನೊಂದು ಸಲ ಅವರು ಇದೇ ಭಾಷೆಯಲ್ಲಿ ಮಾತನಾಡಲಿ.ಮುಂದೇನಾಗುತ್ತೋ ನೋಡಲಿ ಎಂದು ಸವಾಲೆಸೆದರು.
ಇವರು ನನಗೆ ಈಡಿಯೆಟ್ ಎಂದು ಬೈದಿದ್ದಾರೆ. ಇವರು ಎಂತಹ ಈಡಿಯೆಟ್ ಕೆಲಸ ಮಾಡಿ ಜೆಡಿಎಸ್ ತೊರೆದರು?ಅಹಿಂದ ಕಟ್ಟಿ ಎಂತಹ ಈಡಿಯೆಟ್ ಕೆಲಸ ಮಾಡಿದರು? ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮಾಡಿ ಎಂತಹ ಈಡಿಯೆಟ್ ಕೆಲಸ ಮಾಡಿದರು ಅನ್ನುವುದು ನನಗೆ ಗೊತ್ತು. ಇನ್ನೊಂದು ಸಲ ನನ್ನ ಬಗ್ಗೆ ಮಾತನಾಡಲಿ. ಅವರ ಪುರಾಣ ಎಲ್ಲ ಬಿಚ್ಚಿಡುತ್ತೇನೆ ಎಂದು ಗುಡುಗಿದರು.
ವಿರೋಧ ಪಕ್ಷದ ನಾಯಕರಾಗಿ ಒಂದೇ ಒಂದು ದಿನ ವಿದ್ಯುತ್ ಸಮಸ್ಯೆಯ ಬಗ್ಗೆ ಇವರು ಮಾತನಾಡಿದರಾ? ಹಲವು ಸಾರಿ ಹೇಳಿದೆ. ಒಂದು ಬಾರಿ ಚರ್ಚೆ ಮಾಡೋಣ.ಯಾರ ಕಾಲದಲ್ಲಿ ಏನೇನಾಯಿತು? ಯಾರ ಕಾಲದಲ್ಲಿ ಏನು ಲೂಟಿಯಾಯಿತು? ಎಂಬ ಬಗ್ಗೆ ವಿವರವಾಗಿ ಚರ್ಚಿಸಬಹುದಿತ್ತು.
ಆದರೆ ಇದಕ್ಕೆ ಮುಂದಾಗದ ಅವರು ಯೋಗ್ಯರೋ? ಅಯೋಗ್ಯರೋ? ವಿಧಾನಸಭೆಯಲ್ಲಿ ಶಾಸಕರನ್ನು ಬಿಟ್ಟು ಗೂಂಡಾಗಿರಿ ನಡೆಸಿದರು. ಅದನ್ನು ತಪ್ಪು ಅಂತ ಹೇಳಲಿಲ್ಲ. ಇಂತವರು ನಮ್ಮನ್ನು ಟೀಕಿಸುತ್ತಾರೆ.
ದೇಶದಲ್ಲೇ ವಿದ್ಯುತ್ ಇಲ್ಲ.ನಮ್ಮಲ್ಲೂ ವಿದ್ಯುತ್ ಕೊರತೆ ಇದೆ ಎಂದು ಹೇಳಿದ್ದೇನೆ.ಆದರೂ ಇವರ ಸ್ವಿಚ್ ಆಫ್ ಆಗಿದೆ ಎಂದು ಮಾತನಾಡುತ್ತಾರಲ್ಲ? ದೇಶದಲ್ಲೇ ಇಂತಹ ಪರಿಸ್ಥಿತಿ ಇದೆ ಅಂತ ನಾನೀಗ ಕೇಂದ್ರ ಸಚಿವ ಸುಶಿಲ್ ಕುಮಾರ್ ಶಿಂಧೆ ಅವರ ಸ್ವಿಚ್ ಆಫ್ ಆಗಿದೆ ಎಂದು ಹೇಳಲು ಸಾಧ್ಯವೇ ಹೇಳಿ.?
ಇವರಿಗೆ ತಾಖತ್ತಿದ್ದರೆ ಕೇಂದ್ರದ ವಿದ್ಯುತ್ ಸ್ಥಾವರಗಳಿಂದ ರಾಜ್ಯಕ್ಕೆ ಬರಬೇಕಿರುವ ೧೫೪೩ ಮೆಗಾವ್ಯಾಟ್ ವಿದ್ಯುತ್ ಕೊಡಿಸಲು ನೆರವು ನೀಡಬೇಕು. ಆದರೆ ನಮಗೀಗ ಬರುತ್ತಿರುವುದು ೧೨೦೦ ಮೆಗಾವ್ಯಾಟ್ ಮಾತ್ರ.
ಇನ್ನು ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಇವರೆಲ್ಲ ಹೋಗಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದರು.ನಂತರ ಹೊರಗೆ ಬಂದು ಸೋನಿಯಾಗಾಂಧೀಜಿ ಕರ್ನಾಟಕದ ಪರ ಇದ್ದಾರೆ ಎಂದು ಸುಳ್ಳು ಹೊಡೆದರು.ಆದರೆ ಇದೀಗ ಆ ವಿವಾದಕ್ಕೆ ಸಂಬಂಧಿಸಿದಂತೆ ಟ್ರಿಬ್ಯುನಲ್ ರಚಿಸಲಾಗಿದೆ.
ವಾಸ್ತವವಾಗಿ ಇವರು ನಮ್ಮ ವಿರುದ್ಧ ಏನು ಭಾಷೆ ಬಳಸಿದ್ದಾರೆ?ಅದು ಸೋನಿಯಾಗಾಂಧಿ ಅವರ ವಿರುದ್ಧವೇ ಬಳಸಿದಂತಿದೆ.ಈಗಲೂ ನಾನು ಅವರ ಬಗ್ಗೆ ಬಹುವಚನದಲ್ಲೇ ಮಾತನಾಡುತ್ತಿದ್ದೇನೆ.ಆದರೆ ಅವರಿಗೆ ನೆನಪಿರಲಿ,ಅವರು ಬಳಸಿದ ಭಾಷೆಯನ್ನು ಇನ್ನೂ ಪ್ರಖರವಾಗಿ ಬಳಸುವ ಶಕ್ತಿ ನನಗಿದೆ.
ಇನ್ನು ಕುಮಾರಸ್ವಾಮಿ ಅವರು ತಮ್ಮ ತಂದೆ ಬಳಸಿದ ಭಾಷೆಯ ಬಗ್ಗೆ ಸಮರ್ಥನೆ ಮಾಡುತ್ತಾ,ದೇವೇಗೌಡರಿಗೆ ವಯಸ್ಸಾಗಿದೆ.ಡಯಾಬಿಟೀಸ್ ಇದೆ.ಹೀಗಾಗಿ ಆವೇಶದ ಭರದಲ್ಲಿ ಮಾತನಾಡಿದ್ದಾರೆ.ಹೀಗಾಗಿ ಆ ವಿಷಯವನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರಿಗೆ ನೆನಪಿರಲಿ,ನಮ್ಮ ಪಕ್ಷದಲ್ಲೂ ವಯಸ್ಸಾದವರು, ಡಯಾಬಿಟೀಸ್ ಇರುವವರು ಸಾಕಷ್ಟು ಜನ ಇದ್ದಾರೆ.ಅವರ್‍ಯಾರೂ ಹೀಗೆ ವರ್ತಿಸುವುದಿಲ್ಲ.ಮತ್ತು ಇವರಿಗೆ ಬೇಕೆಂದಾಗ ಬೈಯ್ಯುವುದನ್ನು ನಾವು ಕೇಳಬೇಕು.ಪ್ರತಿಭಟನೆ ಸಾಕು ಎಂದಾಗ ನಿಲ್ಲಿಸಬೇಕು ಎಂದರೆ ಇವರೇನು ಸರ್ವಾಧಿಕಾರಿಗಳೇ? ಚೈನಾದಲ್ಲಿದ್ದಾರೆಯೇ? ಎಂದು ಪ್ರಶ್ನಿಸಿದರು.