ಭಟ್ಕಳ: ಮುರ್ಡೇಶ್ವರದಲ್ಲಿ ಆಕರ್ಷಕ ಶೋಭಾಯಾತ್ರೆ ಹಮ್ಮಿಕೊಳ್ಳುವುದರ ಮೂಲಕ ಸೌರಮಾನ ಯುಗಾದಿಯನ್ನು ಅದ್ದೂರಿಯಿಂದ ಆಚರಿಸಲಾಯಿತು.
ನಂತರ ನಡೆದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಯು ಕೆ ಉಡುಪ ಮತ್ತು ಶಾಂತಿ ಶೆಟ್ಟಿ ಯುಗಾದಿ ಹಬ್ಬದ ಆಚರಣೆಯ ಮಹತ್ವದ ಬಗ್ಗೆ ವಿವರಿಸಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಆಚರಣೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು. ಲಯನ್ಸ ಕ್ಲಬ್‌ನ ಅಧ್ಯಕ್ಷ ಡಾ. ಮಂಜುನಾಥ ಶೆಟ್ಟಿ ಮಾತನಾಡಿ ಧಾರ್ಮಿಕ ಆಚರಣೆಗಳು ನಮ್ಮ ಮಾನಸಿಕ-ದೈಹಿಕ ಸ್ವಾಸ್ಥ್ಯಕ್ಕೆ ಸಹಾಯಕವಾಗಿದೆ ಎಂದರು. ಯಕ್ಷರಕ್ಷೆಯ ಅಧ್ಯಕ್ಷ ಡಾ. ಐ ಆರ್ ಭಟ್ ವಿಕೃತಿ ಸಂವತ್ಸರದ ಈ ಉತ್ಸವವು ಸುಕೃತಿಯ ಫಲ ನೀಡಲಿ ಎಂದರು. ಆರ್ ಎನ್ ಎಸ್ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಎಂ ವಿ ಹೆಗಡೆ ಇಂತಹ ಹಬ್ಬಗಳ ಆಚರಣೆಯಿಂದ ಎಲ್ಲರನ್ನೂ ಒಗ್ಗೂಡಿಸಲು ಸಾಧ್ಯ ಎಂದರು. ರಾಘವೇಂದ್ರ ಗಾಯ್ತೊಂಡೆ ಪ್ರವಚನ ಹಾಗೂ ಪಂಚಾಂಗ ಶ್ರವಣ ಮಾಡಿದರು. ಗೀತಾ ಕಿಣಿ ಯುಗಾದಿಯ ಕುರಿತು ಸ್ವರಚಿತ ಕವನ ವಾಚಿಸಿ ಗಮನ ಸೆಳೆದರು. ಗಣೇಶ ಯಾಜಿ ಸ್ವಾಗತಿಸಿದರು. ಎಸ್.ಎಸ್‌ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಭಾರತೀಯ ಸಂಸ್ಕೃತಿ ಸಮಿತಿಯ ಅಧ್ಯಕ್ಷ ಗಜಾನನ ಶೆಟ್ಟಿಯವರು ವಂದಿಸಿದರು. ಸ್ಥಳೀಯ ಲಯನ್ಸಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಯುಗಾದಿ ಪ್ರಯುಕ್ತ ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರವನ್ನು ಏರ್ಪಡಿಸಲಾಗಿತ್ತು. ನಿನ್ನೆ ಯುಗಾದಿ ಪ್ರಯುಕ್ತ ಸ್ಥಳೀಯ ಹಾಗೂ ಹೊರ ಊರಿನ ಭಕ್ತರು ದೇವರ ದರುಶನ ಪಡೆದು ಪೂಜೆ ಸಲ್ಲಿಸಿದರು.