ಕಾರವಾರ, ಡಿಸೆಂಬರ್ 19: ಖ್ಯಾತ ಪರಿಸರವಾದಿ ಮೇಧಾ ಪಾಟ್ಕರ್ ಸಾವಿರಾರು ಜನರೊಂದಿಗೆ ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಹಣಕೋಣ ಯೋಜನೆ ಕೈಬಿಟ್ಟು, ದೌರ್ಜನ್ಯ ನಡೆಸಿದ ಪೊಲೀಸರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.ಶನಿವಾರ ಸಂಜೆ ಇಲ್ಲಿಯ ಮಿನಿ ವಿಧಾನಸೌಧ ಆವರಣದ ಗೇಟ್ ದಾಟಿ ಸಾವಿರಾರು ಜನರೊಂದಿಗೆ ಅವರು ಆಗಮಿಸಿದರು. ಅರಣ್ಯ ಹಾಗೂ ಜನವಸತಿ ಪ್ರದೇಶದಲ್ಲಿ ಪರಿಸರಕ್ಕೆ ಮಾರಕವಾದ ಈ ಯೋಜನೆಗೆ ಹೇಗೆ ಅನುಮತಿ ನೀಡಲಾಗಿದೆ?
ಕಂಪನಿ ಕಾನೂನು ಮೀರಿ ಕಾಮಗಾರಿ ಆರಂಭಿಸಿದರೂ ಜಿಲ್ಲಾಡಳಿತ ಏಕೆ ಸುಮ್ಮನಿದೆ ಎಂದು ಪ್ರಶ್ನಿಸಿದ ಅವರು, ತಕ್ಷಣ ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.ಜು. ೩೦ರಂದು ಹಣಕೋಣದಲ್ಲಿ ಮಹಿಳೆಯರು ಹಾಗೂ ಅಮಾಯಕರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಅವರು ಖಂಡಿಸಿದರು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಶಿಕ್ಷೆಯಲ್ಲ. ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಮೇಧಾ ಪಾಟ್ಕರ್ ಆಗ್ರಹಿಸಿದರು.
ಮಿನಿ ವಿಧಾನಸೌಧದ ಗೇಟ್ ದಾಟಿ ಬರದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗೇಟ್ ಬಳಿ ಸರ್ಕಾರ ಹಾಗೂ ಕಂಪನಿಯ ವಿರುದ್ಧ ಸಾರ್ವಜನಿಕರು ಘೋಷಣೆ ಕೂಗಿದರು. ಆದರೆ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲು ಬರದೆ ಇದ್ದುದರಿಂದ ಮೇಧಾ ಪಾಟ್ಕರ್ ಸೂಚನೆಯಂತೆ ಗೇಟ್ ತಳ್ಳಿಕೊಂಡು ಕಚೇರಿ ಮುತ್ತಿಗೆ ಹಾಕಿದರು.ತರುವಾಯ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಮಾಲಾದೇವಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಲ್ಲಿ ಹಣಕೋಣ ಸ್ಥಾವರ ವಿರೋಧಿ ಸಭೆ ಜರುಗಿತು.
ಸೌಜನ್ಯ: ಕನ್ನಡಪ್ರಭ