ಬೆಂಗಳೂರು, ಎ.16: ಬೆಳಗಾವಿಯಲ್ಲಿ ಏನು ಮಾಡಬೇಕೆಂದು ತಮಗೆ ಗೊತ್ತಿದೆ. ಈ ಬಗ್ಗೆ ಮಹಾರಾಷ್ಟ್ರದ ರಾಜಕೀಯ ಮುಖಂಡರು ಮೂಗು ತೂರಿಸುವ ಆವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಯಡಿಯೂರಪ್ಪ ಬೆಳಗಾವಿಯನ್ನು ರಾಜ್ಯದ ಎರಡನೆ ರಾಜಧಾನಿಯಾಗಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಮಹಾರಾಷ್ಟ್ರದ ರಾಜಕೀಯ ಮುಖಂಡರು, ಅಲ್ಲಿನ ಸರಕಾರ ಹಾಗೂ ಮರಾಠಿಗರು ತೀವ್ರವಾಗಿ ಖಂಡಿಸಿದ್ದರು.
ಅಲ್ಲದೆ ಬೆಳಗಾವಿಯನ್ನು ಎರಡನೆ ರಾಜ್ಯಧಾನಿ ಮಾಡಬಾರದೆಂದು ಆಗ್ರಹಿಸಿದ್ದರು. ಈ ಕುರಿತು ನಗರದಲ್ಲಿರುವ ತನ್ನ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘‘ಬೆಳಗಾವಿ ನಮ್ಮ ಆಸ್ತಿ. ಅಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ಈ ಬಗ್ಗೆ ಮಹಾರಾಷ್ಟ್ರದವರು ರಾಜಕೀಯ ಮಾಡಲು ಮುಂದಾದರೆ, ಇದರಿಂದ ಅವರಿಗೆ ಯಾವುದೇ ಪ್ರತಿಫಲ ಸಿಗುವುದಿಲ್ಲ. ಮಹಾಜನ್ ವರದಿಯೇ ಅಂತಿಮ’’ ಎಂದು ತೀಕ್ಷ್ಣವಾಗಿ ನುಡಿದರು.
ಐಎಸ್‌ಆರ್ ಸಂಸ್ಥೆಯ ವಿರುದ್ಧ ಕ್ರಮ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ರೈತ ಸಂಘದ ಕಬ್ಬು ಬೆಳೆಗಾರರ ನಿಯೋಗವನ್ನು ಭೇಟಿ ಮಾಡಿದ ನಂತರ ಮಾತನಾಡಿದ ಯಡಿಯೂರಪ್ಪ, ಹೊಸಪೇಟೆಯಲ್ಲಿರುವ ಕಬ್ಬು ಅರೆಯುವ ಸಂಸ್ಥೆಯಾದ ಐಎಸ್‌ಆರ್‌ನಿಂದ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಕಬ್ಬು ಬೆಳೆಗಾರರು ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಐಎಸ್‌ಆರ್ ಸಂಸ್ಥೆ 2000 ಟನ್ ಕಬ್ಬು ಅರೆಯಲು ಅನುಮತಿ ಪಡೆದಿದೆ. ಆದರೆ ಈ ಸಂಸ್ಥೆ ಪ್ರಸ್ತುತ 1200 ಟನ್ ಮಾತ್ರ ಕಬ್ಬು ಅರೆಯುತ್ತಿದ್ದು, ಉಳಿದ 800 ಟನ್ ಹಾಗೆಯೆ ಉಳಿಸಲಾಗುತ್ತಿದೆ. ಇದರಿಂದ ಕಬ್ಬು ಬೆಳಗಾರರಿಗೆ ಭಾರಿ ನಷ್ಟವಾಗುತ್ತಿದೆ. ಅಲ್ಲದೆ ಕಬ್ಬು ಬೆಳೆಗಾರರಿಗೆ ಆ ಸಂಸ್ಥೆ 10 ಕೋಟಿ ರೂ. ಬಾಕಿ ನೀಡಬೇಕಿದೆ ಎಂದು ಯಡಿಯೂರಪ್ಪ ವಿವರಿಸಿದರು.ಸದ್ಯದಲ್ಲೇ ಐಎಸ್‌ಆರ್ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಆ ಸಂಸ್ಥೆಯಲ್ಲಿ 2000 ಟನ್ ಕಬ್ಬು ಅರೆಯಲು ಹಾಗೂ ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ಪಾವತಿಸಲು ಸೂಚಿಸಲಾಗುವುದು.ಒಂದು ವೇಳೆ ತಮ್ಮ ಮಾತಿಗೆ ಅವರು ಒಪ್ಪಿಗೆ ನೀಡದಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವುದಾಗಿ ಯಡಿಯೂರಪ್ಪ ಹೇಳಿದರು.
ಎ.23ರಂದು ಮೇಯರ್, ಉಪಮೇಯರ್ ಚುನಾವಣೆ:
ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಎ.23ರಂದು ಚುನಾವಣೆ ನಡೆಯಲಿದ್ದು, ಇಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.ಮೇಯರ್ ಹಾಗೂ ಉಪಮೇಯರ್ ಯಾರಾಗಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಈ ಎರಡೂ ಸ್ಥಾನಗಳಿಗೆ ಸರ್ವಾನು ಮತದಿಂದ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಲಮಂಡಳಿ ಹಾಗೂ ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಉಪಸ್ಥಿತರಿದ್ದರು.