ಭಟ್ಕಳ, ಫೆಬ್ರವರಿ ೯, ಭಟ್ಕಳದ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಡಾ.ಯು.ಚಿತ್ತರಂಜನ್ ಅವರ ಮನೆಗೆ ಕನ್ನ ಹಾಕುತ್ತಿದ್ದ ಇಬ್ಬರು ಕಳ್ಳರನ್ನು ನಗರ ಠಾಣೆಯ ಪೋಲಿಸರು ಸಾರ್ವಜನಿಕರ ಸಹಕಾರದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಬಂಧಿತ ಕಳ್ಳರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾಗಿ ತಿಳಿದುಬಂದಿದೆ.
ಕಳೆದೆರಡು ದಿನಗಳ ಹಿಂದೆ ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮಾಜಿ ರಾಜ್ಯದ್ಯಕ್ಷರ ಮನೆಗೆ ಪೊಲಿಸರ ಕಾವಲು ಕಾಯುತ್ತಿರುವ ಸಂದರ್ಭದಲ್ಲೆ ದೋಚಿಕೊಂಡು ಹೋದ ಸುದ್ದಿ ಹಸಿ ಇರುವಾಗಲೆ ಮಂಗಳವಾರ ಭಟ್ಕಳದ ನಾಗಪ್ಪನಾಯ್ಕ ರಸ್ತೆಯಲ್ಲಿರುವ ಮಾಜಿ ಶಾಸಕ ದಿ.ಡಾ. ಚಿತ್ತರಂಜನ್ ಮನೆಯನ್ನು ಪೋಲಿಸರು ಕಾವಲಿನ ಮಧ್ಯೆ ಕಳ್ಳತನಗೈಯ್ಯುವ ಪ್ರಯತ್ನ ನಡೆದಿದ್ದು ಕಳ್ಳರಲ್ಲಿ ಪೋಲಿಸರ ಭಯ ಮಾಯವಾಗಿರುವುದನ್ನು ಎತ್ತಿ ತೋರಿಸುತ್ತದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೆ ಇದೇ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದರು. ಹಾಗಾಗಿ ಅಲ್ಲಿ ಪೋಲಿಸ್ ಕಾವಲನ್ನು ಇಡಲಾಗಿತ್ತು. ಇಂದು ಮತ್ತೆ ಸಹ ಕಳ್ಳತನಕ್ಕೆ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಪೋಲಿಸರು ಸಾರ್ವಜನಿಕರ ಸಹಾಯದಿಂದ ಇಬ್ಬರು ಆರೋಪಿಗಳನ್ನು ಹಿಡಿದಿದ್ದು ಭಟ್ಕಳದಲ್ಲಿ ಇಲ್ಲಿಯವರೆಗೆ ಜರುಗಿದ ಕಳ್ಳತನ ಪ್ರಕರಣದಲ್ಲಿ ಇವರ ಪಾಲು ಇದೆಯೆ ಎಂಬುದರ ಕುರಿತು ಪೋಲಿಸರು ವಿಚಾರಣೆಯನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.