ಬೆಂಗಳೂರು,ಮಾ,೧೦:ಏಪ್ರಿಲ್ ಕೊನೆಯ ಇಲ್ಲವೆ ಮೇ ತಿಂಗಳ ಆದಿ ಭಾಗದಲ್ಲಿ ರಾಜ್ಯದ ಗ್ರಾಮ ಪಂಚಾಯತ್‌ಗಳ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ವಿಧಾನಸಭೆಗಿಂದು ಈ ವಿಷಯ ತಿಳಿಸಿದ್ದು, ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸಲು ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಏಪ್ರಿಲ್/ ಮೇ ಮಾಹೆಯಲ್ಲಿ ಚುನಾವಣೆಗೆ ಸಿದ್ಧತೆಗಳು ನಡೆದಿವೆ ಎಂದು ಆಯೋಗ ತಿಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಹಾಲಿ ಇರುವ ಗ್ರಾಮ ಪಂಚಾಯಿತಿಗಳ ಅಧಿಕಾರದ ಅವಧಿ ಈ ವರ್ಷದ ಮಾರ್ಚ್ ಕೊನೆ ಹಾಗೂ ಏಪ್ರಿಲ್ ತಿಂಗಳಿಗೆ ಕೊನೆಗೊಳ್ಳುತ್ತಿದ್ದು, ಚುನಾವಣೆಗಳನ್ನು ನಡೆಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಹಳೆಯ ಗಾಯಗಳನ್ನು ಕೆದಕಿ ಮೇಲ್ಮನೆಯಲ್ಲಿ ಮತ್ತೊಮ್ಮೆ ಮಾತಿನ ಚಕಮಕಿ
ರಾಜ್ಯಪಾಲರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯಕ್ಕೆ ಬರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಮುಖ್ಯಮಂತ್ರಿಯವರನ್ನು ಬ್ಲಡಿ ಬಾಸ್ಟರ್ಡ್ ಎಂದು ಟೀಕಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗಳು ಮೇಲ್ಮನೆಯಲ್ಲಿಂದು ಪ್ರಸ್ತಾಪವಾಗಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾದ ಪ್ರಸಂಗ ನಡೆಯಿತು.
ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ಟೀಕಾ ಪ್ರಹಾರ ನಡೆಸಿದ ರಾಜ್ಯಪಾಲರ ವಿರುದ್ಧ ಈಶ್ವರಪ್ಪ ನೀಡಿದ ಹೇಳಿಕೆ ಕುರಿತು ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ಬಿಜೆಪಿಯ ಎಸ್.ಆರ್. ಲೀಲಾ, ಮನೋಹರ ಮಸ್ಕಿ, ಸಿದ್ದರಾಮಣ್ಣ ಅವರು ಪ್ರಸ್ತಾಪಿಸಿ ಜೆಡಿಎಸ್‌ಗೆ ತಿರುಗೇಟು ನೀಡುವ ಪ್ರಯತ್ನ ನಡೆಸಿದರು.
ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಾಣಯ್ಯ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಈಶ್ವರಪ್ಪ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಇದು ಪ್ರಜಾತಂತ್ರ ವ್ಯವಸ್ಧೆಗೆ ಮಾರಕ. ಇಂತಹ ಹೇಳಿಕೆಗಳಿಂದ ಸಂವಿಧಾನದ ಮುಖ್ಯಸ್ಧರ ಹುದ್ದೆಗೆ ಅಗೌರವ ತರಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಗ ಎಸ್.ಆರ್. ಲೀಲಾ, ಮಾಜಿ ಪ್ರಧಾನಿಯವರು ಸವಿಂಧಾನದ ಮುಖ್ಯಸ್ಧರಾದ ಮುಖ್ಯಮಂತ್ರಿ ವಿರುದ್ಧ ನೀಡಿದ ಹೇಳಿಕೆಯ ಬಗ್ಗೆಯೂ ಚರ್ಚೆ ನಡೆಯಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಯಿಸಿದ ಸಿದ್ದರಾಮಣ್ಣ, ಈಶ್ವರಪ್ಪ ಈ ಮನೆಯ ಸದಸ್ಯರಲ್ಲ. ಅವರ ಹೆಸರನ್ನು ಪ್ರಸ್ತಾಪಿಸುವುದು ಸರಿಯಲ್ಲ ಎಂದರು. ಮನೋಹರ ಮಸ್ಕಿ ಅವರು ಕೂಡ ಧನಿಗೂಡಿಸಿದರು.
ಈ ಹಂತದಲ್ಲಿ ಬಿಜೆಪಿಯ ಪ್ರೋ: ಕೃಷ್ಣಭಟ್, ನಾಣಯ್ಯ ಅವರು ಹೆಚ್ಚಿಗೆ ಮಾತನಾಡುತ್ತಿದ್ದಾರೆ. ಹೊಸ ಸದಸ್ಯರಾದ ತಮಗೂ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬೇಕು. ಚರ್ಚೆ ಏಕಪಕ್ಷೀಯವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಗ ನಾಣಯ್ಯ, ತಾವು ಮಾತನಾಡುವುದನ್ನು ತಡೆಯಲು ನಡೆಸುತ್ತಿರುವ ತಂತ್ರ ಇದಾಗಿದೆ. ಇದೇ ಧೋರಣೆಯಿಂದ ತಮಗೆ ದೊರಕಬೇಕಿದ್ದ ಪ್ರತಿಪಕ್ಷದ ನಾಯಕರ ಹುದ್ದೆಯನ್ನು ತಪ್ಪಿಸಲಾಯಿತು. ಇದಕ್ಕಾಗಿ ಇಬ್ಬರು ಜೆಡಿಎಸ್ ಸದಸ್ಯರಿಂದ ರಾಜೀನಾಮೆ ಕೊಡಿಸುವ ತಂತ್ರವನ್ನು ಬಿಜೆಪಿ ಅನುಸರಿಸಿತು ಎಂದು ನೊಂದು ನುಡಿದರು.
ಬಿಜೆಪಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ನಾವು ಬಲವಂತವಾಗಿ ರಾಜೀನಾಮೆ ಕೊಡಿಸಿಲ್ಲ. ಸ್ವಂತ ಇಚ್ಚೆಯಿಂದ ರಾಜೀನಾಮೆ ಕೊಟ್ಟಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಇದಕ್ಕೆ ಪ್ರತಿಕ್ರಯಿಸಿದ ಅವರು, ನಾಣಯ್ಯ, ಹೊಸ ಸದಸ್ಯರಿಗೆ ಮಾತನಾಡಲು ಅವಕಾಶ ಕೊಡಿ. ತಾವು ಮಾತನಾಡುವುದಿಲ್ಲ ಎಂದು ಮುನಿಸಿಕೊಂಡು ಕುಳಿತರು. ಮುಖ್ಯಮಂತ್ರಿ ಯಡಿಯೂರಪ್ಪ, ಸಭಾಪತಿ ವೀರಣ್ಣ ಮತ್ತೀಕಟ್ಟೆ ಅವರು ಮಾಡಿದ ಮನವಿಗೂ ಕೂಡ ನಾಣಯ್ಯ ಜಗ್ಗಲಿಲ್ಲ. ತಾವು ಮಾತನಾಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರೋ: ಕೃಷ್ಣಭಟ್ ಮಾತನಾಡಿ, ನನ್ನ ಮಾತಿನಿಂದ ನಾಣಯ್ಯ ಅವರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ನಾಣಯ್ಯ ತಮ್ಮ ಚರ್ಚೆ ಮುಂದುವರೆಸಬೇಕೆಂದು ಮನವಿ ಮಾಡಿದರು. ಇದಕ್ಕೂ ನಾಣಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಜೆಡಿಎಸ್ ಸದಸ್ಯರು ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ತೀರ್ಮಾನ ಕೈಗೊಂಡು ಸುಮ್ಮನೆ ಕುಳಿತರು. ಕಾಂಗ್ರೆಸ್ ಸದಸ್ಯರಿಂದ ಚರ್ಚೆ ಮುಂದುವರೆಯಿತು.