ಭಟ್ಕಳ, ಅಕ್ಟೋಬರ್ 2: ಭಟ್ಕಳದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಹೊಂಡಮಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದ್ದು ಸಂಚಾರ ಸಂಪೂರ್ಣ ಹದಗೆಟ್ಟು ಹೋಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೊಳೆ ಹಳ್ಳಗಳ ಭರ್ತಿಯೊಂದಿಗೆ ಮಳೆಗಾಲದ ಆರಂಭದ ದಿನಗಳು ಮೆಲುಕು ಹಾಕಲಾರಂಭಿಸಿವೆ.

ಭಾರೀ ಮಳೆಯ ಕಾರಣ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಸಿಂಗಾರಗೊಂಡಿದ್ದ ಭತ್ತದ ಪೈರುಗಳಿಗೆ ಕೆಸರು ಮೆತ್ತಿಕೊಂಡಿದ್ದು, ಬಿಸಿಲನ್ನು ನಿರೀಕ್ಷಿಸಿ ಕೊಯ್ಲಿನ ಅವಧಿಯು ಮುಂದೂಡುವ ಸಾಧ್ಯತೆ ಕಂಡು ಬರುತ್ತಿದೆ. ತಾಲೂಕಿನ ಚೌಥನಿ, ಮುರುಡೇಶ್ವರ ಭಾಗದಲ್ಲಿ ನೆಲಕ್ಕೆ ಮೆತ್ತಿಕೊಂಡಿರುವ ಪೈರನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಬೋಟಿನ ಮೀನುಗಾರಿಕೆ ಕಳೆಗುಂದಿ ದೋಣಿಗಳ ಮೊರೆ ಹೋಗಿದ್ದ ಮೀನುಗಾರರಿಗೂ ಮಳೆಯ ಸಂಕಟದ ಅರಿವಾಗಿದೆ. ಮಳೆಯ ರಭಸ ಹಾಗೂ ಸುನಾಮಿಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ನೀರಿಗಿಳಿಯಲು ಅವರು ಹಿಂಜರಿಯುತ್ತಿದ್ದಾರೆ.

ಗುರುವಾರ ಬೆಳಿಗ್ಗೆ ೮ಗಂಟೆಯಿಂದ ಶುಕ್ರವಾರ ಬೆಳಿಗ್ಗೆ ೮ರ ಅವಧಿಯಲ್ಲಿ ತಾಲೂಕಿನಲ್ಲಿ 132.8ಮಿಮೀ. ಮಳೆ ದಾಖಲಾಗಿದೆ. ಮಳೆಯ ಸಂಗಾತಿ ಚೌಥನಿ ಹೊಳೆಯು ಮೈತುಂಬಿ ಹರಿಯುತ್ತಿದ್ದು, ತೀರದ ನಿವಾಸಿಗಳು ಮತ್ತೊಮ್ಮೆ ಆತಂಕಕ್ಕೆ ಸಿಲುಕಿದ್ದಾರೆ. ತಹಸೀಲ್ದಾರ ಎಸ್.ಎಮ್.ನಾಯ್ಕ ಹಾಗೂ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ ನದಿ ತೀರದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನಲ್ಲಿ ಕತ್ತಲು ಆವರಿಸಿಕೊಂಡಿದ್ದು, ಮುಂದಿನ ಇಪ್ಪತ್ನಾಲ್ಕು ಗಂಟೆಗಳ ಅವಧಿಯಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ ಇದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಹಸೀಲ್ದಾರ ಎಸ್.ಎಮ್.ನಾಯ್ಕ, ಪರಿಸ್ಥಿತಿಯನ್ನು ನಿಭಾಯಿಸಲು ತಾಲೂಕು ಆಡಳಿತ ಸನ್ನದ್ಧ ಸ್ಥಿತಿಯಲ್ಲಿರುವುದಾಗಿ ತಿಳಿಸಿದ್ದಾರೆ.