ಭಟ್ಕಳ, ಅಕ್ಟೋಬರ್ ೨೭: ಕ್ಷುಲ್ಲಕ ಕಾರಣವನ್ನೇ ನೆಪ ಮಾಡಿಕೊಂಡು ಸಾಗುವ ಸಂಘರ್ಷಗಳು ಸಮಾಜದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ ಹೇಳಿದ್ದಾರೆ.
ಅವರು ಸೋಮವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಸಾರಾಯಿ ಮಾರಾಟ ಹಾಗೂ ಆ ಸಂಬಂಧ ನಡೆಯುವ ಪ್ರತಿಕ್ರಿಯೆಗಳಲ್ಲಿ ಕಾನೂನು ಪಾಲನೆ ಮಹತ್ವದ್ದಾಗಿದೆ ಎಂದು ತಿಳಿಸಿದ ಅವರು, ಎಲ್ಲದಕ್ಕೂ ಕೋಮು ಬಣ್ಣವನ್ನು ಹಚ್ಚುತ್ತಾ ಸಾಗದಿರುವಂತೆ ಕರೆ ನೀಡಿದರು. ಗಲಾಟೆ, ಗದ್ದಲಗಳು ಬಡವರನ್ನು ಇನ್ನಷ್ಟು ಅಸಹಾಯಕತೆಯೆಡೆಗೆ ಕರೆದೊಯ್ಯತ್ತಿದ್ದು, ಎಲ್ಲರಲ್ಲಿಯೂ ಸೌಹಾರ್ದತೆ ಮೂಡಿ ಬರಬೇಕಾಗಿದೆ ಎಂದ ಅವರು ಮನುಷ್ಯ ಕಲ್ಪನೆಗಳು ಪ್ರತಿಯೊರ್ವರಲ್ಲಿಯೂ ಜಾಗೃತವಾಗಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.