ಬೆಂಗಳೂರು,ಮಾ,೧೦-ರಾಜ್ಯದ ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಾಣವನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಬಸವರಾಜ್ ಪಾಟೀಲ್ ಅಟ್ಟೂರ್‌ರವರ ಪ್ರಶ್ನೆಗೆ ಉತ್ತರ ನೀಡಿದ ಅವರು ಈ ವಿಷಯ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಬಯಲು ಮಲವಿಸರ್ಜನೆಯ ಪದ್ಧತಿ ಜಾರಿಯಲ್ಲಿದ್ದು ಅದನ್ನು ನಿವಾರಿಸುವ ದೃಷ್ಟಿಯಿಂದ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದೆ.ಇದುವವರೆಗೆ ಒಟ್ಟು ಇಪ್ಪತ್ಮೂರು ಲಕ್ಷ ಮನೆಗಳನ್ನು ಕಟ್ಟಲಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಐವತ್ತೈದು ಲಕ್ಷ ಮನೆಗಳನ್ನು ಕಟ್ಟಲು ಸರ್ಕಾರ ಬಯಸಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಎಲ್ಲ ರೀತಿಯ ಬೆಂಬಲ ನೀಡುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಇದೇ ಕಾರಣಕ್ಕಾಗಿ ಒಂದೂವರೆ ಸಾವಿರ ರೂಗಳನ್ನು ನೀಡುತ್ತಿದ್ದು ರಾಜ್ಯ ಸರ್ಕಾರ ಕೂಡಾ ಇದಕ್ಕೆ ಸಂಬಂಧಿಸಿದಂತೆ ಒಂದೂವರೆ ಸಾವಿರ ರೂಗಳನ್ನು ಫಲಾನುಭವಿಗಳಿಗೆ ಒದಗಿಸುತ್ತಿದೆ ಎಂದು ನುಡಿದರು.
ಸಾರ್ವಜನಿಕ ಶೌಚಾಲಯ ಪದ್ಧತಿ ಇದುವರೆಗೂ ಯಶಸ್ವಿಯಾಗಿಲ್ಲ.ಅದನ್ನು ಯಾರು ನಿರ್ವಹಿಸಬೇಕು?ಎಂಬ ವಿಷಯದಲ್ಲಿಯೇ ಸಮಸ್ಯೆಗಳು ಕಂಡು ಬಂದು ಈ ಪದ್ಧತಿ ವೈಫಲ್ಯ ಕಂಡಿದೆ ಎಂದು ವಿಷಾದಿಸಿದರು.
ಇಷ್ಟೆಲ್ಲದರ ನಡುವೆಯೇ ರಾಜ್ಯದ ಎಲ್ಲ ಮನೆಗಳಲ್ಲಿ ಶೌಚಾಲಯವನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದ್ದು ಅದೇ ಕಾಲಕ್ಕೆ ಎಲ್ಲರೂ ಸೇರಿ ಈ ವಿಷಯದಲ್ಲಿ ಜನರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.
ಇಂತಹ ಯೋಜನೆಗಳಲ್ಲೂ ಹಣ ಹೊಡೆದು ತಿನ್ನುವವರು ಇದ್ದರೆ ಗತಿಯೇನು?ಎಂದು ಪ್ರಶ್ನಿಸಿದ ಅವರು,ಯಾವ ಕಾರಣಕ್ಕೂ ಈ ಲೋಪವಾಗಬಾರದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಬಸವರಾಜ್ ಪಾಟೀಲ್ ಅಟ್ಟೂರ್,ರಾಜ್ಯದ ಯಾವ ಗ್ರಾಮಗಳಿಗೆ ಹೋದರೂ ಮಹಿಳೆಯರು ಶೌಚಾಲಯದ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತಿದ್ದಾರೆ.ಇವತ್ತು ಮಹಿಳೆಯರಿಗೆ ಶೇಕಡಾ ಮೂವತ್ಮೂರು ಪರ್ಸೆಂಟು ಮೀಸಲಾತಿ ಕೊಡುವ ಕಾಲ ಬಂದರೂ ಅವರಿಗೆ ಸರಿಯಾದ ಶೌಚಾಲಯವಿಲ್ಲ ಎಂದರೆ ಏನು ಹೇಳಬೇಕು?ಅಂತ ಪ್ರಶ್ನೆ ಮಾಡಿದರು.
ಸದಸ್ಯ ಬಿ.ಸಿ.ಪಾಟೀಲ್ ಮಾತನಾಡಿ:ರಾಜ್ಯ ಸರ್ಕಾರ ಶೌಚಾಲಯಗಳನ್ನು ಕಟ್ಟಲು ಹಣ ಕೊಟ್ಟರೆ ಅದನ್ನು ನುಂಗಿ ಹಾಕುವ ಕೆಲಸವಾಗಿದೆ ಎಂದು ದೂರಿದರು.
ತಮ್ಮ ಕ್ಷೇತ್ರದಲ್ಲಿ ನಡೆದ ಈ ಪ್ರಕರಣದ ಬಗ್ಗೆ ವಿವರ ನೀಡಿದ ಅವರು,ಸರ್ಕಾರ ಮೊದಲು ಇಂತವರನ್ನು ಮಟ್ಟ ಹಾಕಬೇಕು.ಇದಾಗದಿದ್ದರೆ ಯೋಜನೆ ಸಫಲವಾಗುವುದಿಲ್ಲ ಎಂದು ಹೇಳಿದರು.
ವಾಲೆ ಮಂಜು ಮಾತನಾಡಿ;ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಹಣ ಕೊಡುವಾಗ ಬಿಪಿಎಲ್ ಕುಟುಂಬಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಿದೆ.ಇದರ ಜತೆಗೆ ಎಪಿಎಲ್ ಕುಟುಂಬಗಳಿಗೂ ಶೌಚಾಲಯ ನಿರ್ಮಾಣಕ್ಕಾಗಿ ಮೂರು ಸಾವಿರ ರೂ ಹಣ ನೀಡಬೇಕು ಎಂದು ಒತ್ತಾಯಿಸಿದರು.