ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆಗೆ ಸರ್ಕಾರದ ಅಸ್ತು

ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆಗೆ ಸರ್ಕಾರದ ಅಸ್ತು

Tue, 12 Jan 2010 03:00:00  Office Staff   S.O. News Service
ಬೆಂಗಳೂರು,ಜನವರಿ 11:ತೀವ್ರ ವಿವಾದಕ್ಕೆ ಕಾರಣವಾಗಿ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳ ಅಳವಡಿಕೆ ಯೋಜನೆಗೆ ರಾಜ್ಯ ಸರ್ಕಾರ ಕೊನೆಗೂ ತಾತ್ವಿಕ ಅನುಮೋದನೆ ನೀಡಿದೆ. 
 
ಸಾರ್ವಜನಿಕ  ಸುರಕ್ಷತೆ ಹಾಗೂ ಭದ್ರತೆಯನ್ನು ಮೂಡಿಸಲು ತಾಂತ್ರಿಕ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಹೈ-ಸೆಕ್ಯೂರಿಟಿ ರಿಜಿಸ್ಟ್ರೇಷನ್ ಫಲಕ ಎಂಬ ಹೊಸ ವ್ಯವಸ್ಥೆಯನ್ನು ತಂದಿದ್ದು, ಇದನ್ನು ರಾಜ್ಯದಲ್ಲೂ ಜಾರಿಗೆ ತರಲು ನಿರ್ಧರಿಸಲಾಗಿದೆ. 
 
ಮೋಟಾರು ವಾಹನಗಳನ್ನು ಭಯೋತ್ಪಾದನೆ ಕೃತ್ಯಗಳಿಗೆ ಉಪಯೋಗಿಸದಂತೆ  ತಡೆಯುವುದು, ಹತ್ಯೆ, ಕಳ್ಳತನ, ಅಪಹರಣ ಇತ್ಯಾದಿ ಅಪರಾಧಗಳನ್ನು ಎಸಗುವುದಕ್ಕೆ ವಾಹನಗಳ ಬಳಕೆಗೆ ಕಡಿವಾಣ ಹಾಕುವುದು ಮತ್ತು ಹೆಚ್ಚುತ್ತಿರುವ ವಾಹನಗಳ ಕಳ್ಳತನವನ್ನು ನಿರ್ಭಂದಿಸುವುದು ಮೋಟಾರು ವಾಹನಗಳಿಗೆ ಹೈ -ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್ .ಎಸ್.ಆರ್.ಪಿ.) ಅಳವಡಿಕೆಯ ಈ ಹೊಸ ಯೋಜನೆಯ ಉದ್ದೇಶವಾಗಿರುತ್ತದೆ.   
 
ಕೇಂದ್ರ  ಮೋಟಾರು ವಾಹನ  ನಿಯಮಗಳು, ೧೯೮೯ ರ  ನಿಯಮ ೫೦ ರಂತೆ ಸದರಿ ಫಲಕಗಳನ್ನು ಮೋಟಾರು ವಾಹನದ ಮುಂಬಾಗದಲ್ಲಿ ಮತ್ತು ಹಿಂಬದಿಯಲ್ಲಿ ನಿರ್ಧಿಷ್ಟಪಡಿಸಿರುವ ಮಾದರಿಯಂತೆ ಪ್ರದರ್ಶಿಸಬೇಕಾಗಿದೆ. 

ನೋಂದಣಿ ಫಲಕಗಳನ್ನು ಮರು ಉಪಯೋಗಿಸದಂತೆ/ಬದಲಾಯಿಸಲು ಸಾಧ್ಯವಾಗದಂತೆ ಜೋಡಣೆ ಮಾಡುವುದು ಈ ನಿಯಮದ ಅಗತ್ಯತೆಯಾಗಿದೆ.  ಈ ನೋಂದಣಿ ಫಲಕದ ತಾಂತ್ರಿಕ ವಿಶಿಷ್ಟತೆ ಏನೆಂದರೆ ವಾಹನವನ್ನು ಸುಲಭವಾಗಿ ಗುರುತಿಸುವುದು ಮತ್ತು ಪತ್ತೆ ಹಚ್ಚುವುದಾಗಿರುತ್ತದೆ.  

ನಿರ್ಧಿಷ್ಟಪಡಿಸಿರುವ ಅಕ್ಷರ/ಸಂಖ್ಯೆಯನ್ನು ನೀಡುವುದರ ಜೊತೆಗೆ ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆಯ ದೃಷ್ಠಿಯಿಂದ ಭದ್ರತಾ ಮಾಪನಗಳೊಂದಿಗೆ ನೋಂದಣಿಯ ಗುರುತು ಮತ್ತು ನೋಂದಣಿಯ ಸಂಖ್ಯೆಯನ್ನು ಆಯಾ ಪ್ರಾದೇಶಿಕ ಸಾರಿಗೆ ಕಛೇರಿಯ ಆವರಣದಲ್ಲಿ ವಾಹನಗಳಿಗೆ ಅಳವಡಿಸುವುದಾಗಿದೆ. 

ಈ ಯೋಜನೆಯ ಹಾಲಿ ಪದ್ದತಿಯಂತೆ ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ತಗಡಿನ ಮೇಲೆ ಬಣ್ಣ ಹಚ್ಚಿ ನೋಂದಣಿ ಸಂಖ್ಯೆಯನ್ನು ಬರೆಯುವುದಕ್ಕೆ ಬದಲಿಯಾಗಿರುತ್ತದೆ.  ಹೀಗೆ ಹೈ-ಸೆಕ್ಯುರಿಟಿ-ರಿಜಿಸ್ಟ್ರೇಷನ್ ಫಲಕಗಳನ್ನು ಸಾರಿಗೆ ಇಲಾಖೆಯ ಹತೋಟಿಯಲ್ಲಿ ಮತ್ತು ಮೇಲ್ವಿಚಾರಣೆಯಲ್ಲಿ ನೀಡಿ ವಾಹನಗಳಿಗೆ ಅಳವಡಿಸಲಾಗುತ್ತಿದೆ. 
ಸರ್ವೋಚ್ಚ ನ್ಯಾಯಾಲಯವು  ನೀಡಿರುವ ಇತ್ತೀಚಿನ ಆದೇಶದಲ್ಲಿ ಹೆಚ್.ಎಸ್.ಆರ್.ಪಿ. ಯೋಜನೆಯನ್ನು ಅನುಷ್ಠಾನಗೊಳಿಸಲು ಈ ವರ್ಷದ ಮೇ ವರೆವಿಗೆ ಕಾಲಾವಕಾಶ ವಿಸ್ತರಿಸಿದೆ.  





Share: