ಭಟ್ಕಳ, ಡಿಸೆಂಬರ್ ೧: ಇತ್ತೀಚೆಗೆ ಶಿರಸಿಯ ಲಾಡ್ಜ್ ಒಂದರಲ್ಲಿ ಮಹಿಳೆಯೋರ್ವರೊಂದಿಗೆ ಇದ್ದರೆನ್ನಲಾದ ಹಿಂದೂ ಜಾಗರಣ ವೇದಿಕೆಯ ಗೋವಿಂದ ನಾಯಕ್ ನಿನ್ನೆ ಭಟ್ಕಳದಲ್ಲಿ ಪತ್ರಿಕಾ ಪ್ರತಿನಿಧಿಗಳೆದುರು ಕಾಣಿಸಿಕೊಂಡರು.
ನಗರದ ಶಮ್ಸುದ್ದೀನ್ ವೃತ್ತದ ಬಳಿ ಇರುವ ಸತ್ಕಾರ್ ಹೋಟೆಲಿನಲ್ಲಿ ಪತ್ರಿಕಾ ಪ್ರತಿನಿಧಿಗಳನ್ನು ಆಹ್ವಾನಿಸಿದ ಅವರು ತಮ್ಮ ಮೇಲಿರುವ ಕಳಂಕವನ್ನು ತೊಡೆಯಲು ವಿವರಣೆ ನೀಡುತ್ತಾ ಇದೊಂದು ಷಡ್ಯಂತ್ರವಾಗಿದ್ದು ಹಿಂದೂ ಜಾಗರಣಾ ವೇದಿಕೆಯ ಮೇಲೆ ಕಳಂಕ ತರುವ ಪ್ರಯತ್ನವಾಗಿದೆ ಎಂದು ವಿವರಿಸಿದರು.
ತಮ್ಮ ಮೇಲಿರುವ ಆರೋಪದ ಕುರಿತಾಗಿ ಅವರು ಹೇಳಿದ್ದು ಹೀಗೆ:
"ಶಿರಸಿಯಿಂದ ಹಿಂದಿರುಗುತ್ತಿದ್ದಾಗ ಸಿದ್ಧಾಪುರದ ಪೂರ್ಣಿಮಾ ಹೋಟೆಲಿನಲ್ಲಿ ಸ್ನೇಹಿತರೊಬ್ಬರೊಂದಿಗೆ ತಂಗಿದ್ದೆ. ಆ ಸಮಯದಲ್ಲಿ ಭಟ್ಕಳದಿಂದ ಲಲಿತಾ ರವರಿಂದ ನನ್ನ ಮೊಬೈಲಿಗೊಂದು ಕರೆ ಬಂದಿತ್ತು. ಆಕೆಗೆ ಯಾವುದೋ ಕೆಲಸಕ್ಕಾಗಿ ಹಣದ ಅವಶ್ಯಕತೆಯಿದ್ದುದರಿಂದ ನನಗೆ ಫೋನ್ ಮಾಡಿದ್ದರು. ಲಲಿತಾ ಭಟ್ಕಳದವರಾಗಿದ್ದು ನನಗೆ ಪರಿಚಯಸ್ಥರಿದ್ದುದರಿಂದ ನಾವು ಉಳಿದುಕೊಂಡಿದ್ದ ಹೋಟೆಲಿಗೆ ಬರುವಂತೆ ಕರೆದೆ. ಬಳಿಕ ಹೋಟೆಲಿಗೆ ಆಗಮಿಸಿದ ಲಲಿತಾ ಯಾರಿಗೋ ಒಂದು ಕರೆ ಮಾಡಲು ನನ್ನ ಮೊಬೈಲ್ ಉಪಯೋಗಿಸಿದ್ದರು. ಆಕೆ ಮೊಬೈಲಿನಲ್ಲಿ ಮಾತನಾಡುತ್ತಿದ್ದಾಗ ಊಟ ತರಲೆಂದು ಹೋಟೆಲಿಗೆ ಹೋಗಿದ್ದೆ. ಆದರೆ ಹಿಂದಿರುಗಿ ಬರುವ ಸಮಯದಲ್ಲಿ ಹೋಟೆಲಿನ ಸಮೀಪ ಪೋಲೀಸ್ ಜೀಪ್ ಇದ್ದದ್ದು ಕಂಡುಬಂದಿತ್ತು. ಪೋಲೀಸರು ನನ್ನನ್ನು ಯಾವುದೋ ಸಂಚಿಗೆ ಒಳಪಡಿಸಬಹುದೆಂಬ ಆತಂಕದಿಂದ ನಾನು ಅಲ್ಲಿಂದ ಕಂಬಿಕೀಳಬೇಕಾಯಿತು"
ಪೋಲೀಸರು ನೀಡಿದ ವಿವರಣೆಯನ್ನು ನೋಡಿ ಖೇದ ವ್ಯಕ್ತಪಡಿಸಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಪೈ ಯವರು ಪೋಲೀಸರ ವಿವರಣೆ ತಮಗೆ ನೋವುಂಟುಮಾಡಿದೆ ಹಾಗೂ ವೇದಿಕೆಗೆ ಕಳಂಕ ತರುವವರ ವಿರುದ್ಧ ಪ್ರತಿಭಟಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕರಾದ ದಿನೇಶ್ ನಾಯಕ್, ಕೃಷ್ಣ ದೇವಾಡಿಗ ಮತ್ತು ಮೋಹನ ಶಿರಾಳಿಕರ್ ಉಪಸ್ಥಿತರಿದ್ದರು.