ಭಟ್ಕಳ, ನವೆಂಬರ್ 11: ರಾಜ್ಯದ ಹಿಂದುಳಿದ ಹಾಗೂ ಅತಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಸರಕಾರ ಕಟಿಬದ್ಧವಾಗಿದ್ದು,3000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಅವರು ತಾಲೂಕಿನ ವಿವಿದೆಡೆ ಸುಮಾರು ೩ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ ನಂತರ ಕರೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಯೋಜನೆಯಡಿ ರಸ್ತೆ ಸುಧಾರಣೆಯತ್ತ ಸರಕಾರ ಗಮನ ಕೇಂದ್ರೀಕರಿಸಿದೆ. ಉಳಿದ ಇಲಾಖೆಗಳೂ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದು, ಅಭಿವೃದ್ಧಿಯ ಕಾರಣಕ್ಕಾಗಿ ಸರಕಾರ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಕ್ವಾರಿಗಳ ನಿಲುಗಡೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಪಿಡಬ್ಲ್ಯೂಡಿ, ಜಿಲ್ಲಾಪಂಚಾಯತ ಸೇರಿದಂತೆ ಕಾಮಗಾರಿ ಕೈಗೊಳ್ಳುವ ವಿವಿಧ ಇಲಾಖೆಗಳಿಂದ ಬೇಡಿಕೆಯ ಪಟ್ಟಿಯನ್ನು ಪರಿಗಣಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಅರಣ್ಯ ಭೂಮಿ ಅತಿಕ್ರಮಣ ಸಕ್ರಮ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದ ಸಚಿವರು ಗ್ರಾಮಪಂಚಾಯತ ಮಟ್ಟದಲ್ಲಿ ಅನಿಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯಬೇಕಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜೆ.ಡಿ.ನಾಯ್ಕ, ತಾಲೂಕು ಪಂಚಾಯತ ಅಧ್ಯಕ್ಷೆ ಗೌರಿ ಮೊಗೇರ, ಎನ್.ಜಿ.ಕೊಲ್ಲೆ, ಜಿಲ್ಲಾಪಂಚಾಯತ ಸದಸ್ಯೆ ಸುಭದ್ರಾ ದೇವಾಡಿಗ, ಎಮ್.ಎಮ್.ನಾಯ್ಕ, ಭಟ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಪರಮೇಶ್ವರ ಮೇಸ್ತ, ತಾಲೂಕು ಪಂಚಾಯತ ಸದಸ್ಯ ಪರಮೇಶ್ವರ ದೇವಾಡಿಗ, ಈರಪ್ಪ ಗರ್ಡೀಕರ, ಜಯಲಕ್ಷ್ಮಿ ಗೊಂಡ, ರತ್ನಾ ಪಾಂಡುರಂಗ ನಾಯ್ಕ, ಗಣೇಶ ನಾಯ್ಕ, ಮೋಹನ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.