ಹಾಸನ, ಡಿಸೆಂಬರ್ 11: ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಉಗ್ರಗಾಮಿ ಮತ್ತು ನಕ್ಸಲ್ ಚಟುವಟಿಕೆಯ ಯಾವುದೇ ಸುಳಿವಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಜೀವನ್ಕುಮಾರ್ ಗಾಂವ್ಕರ್ ತಿಳಿಸಿದ್ದಾರೆ.
ಹಾಸನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗಾಂವ್ಕರ್, ಮಡಿಕೇರೆಯಂತೆ ಹಾಸನದಲ್ಲೂ ವಲಸೆ ಬಂದಿರುವ ಶುಂಠಿ ವ್ಯಾಪಾರಿಗಳಿದ್ದಾರೆ. ಆದರೆ ಉಗ್ರರ ನಂಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಪಪಡಿಸಿದರು.
ಪಶ್ಚಿಮಘಟ್ಟದಲ್ಲೂ ಈವರೆಗೆ ನಕ್ಸಲ್ ಅಥವಾ ಉಗ್ರ ಚಟುವಟಿಕೆಯ ಸುಳಿವು ದೊರೆತಿಲ್ಲ. ಆದರೂ, 365 ದಿನವೂ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಸಾಮಾನ್ಯ ಪ್ರೇಮ ಪ್ರಕರಣಗಳು ನಡೆಯುತ್ತಿದ್ದು, ಲವ್ ಜಿಹಾದ್ ಪ್ರಕರಣಗಳು ವರದಿಯಾಗಿಲ್ಲ. ಸಮಾಜದ ಶಾಂತಿ ಕದಡುವ ಕೃತ್ಯಗಳ ಬಗ್ಗೆ ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದರು.
ಪೊಲೀಸರ ಕಾರ್ಯ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಧರ್ಮವೀರ ವರದಿಯಂತೆ ರಜೆ ಸೇರಿದಂತೆ ಇನ್ನಿತರ ಸೌಭ್ಯಗಳನ್ನು ಒದಗಿಸಲಾಗಿದೆ. ಹಾಗಾಗಿ ಪೊಲೀಸರಲ್ಲಿ ಒತ್ತಡ ಕಡಿಮೆಯಾದಂತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ.ಶರತ್ಚಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಯಲ್ಲಪ್ಪ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.