ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ರಾಕೆಟ್, ಹೂಕುಂಡ ಪಟಾಕಿ ನಿಷೇಧಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ರಾಕೆಟ್, ಹೂಕುಂಡ ಪಟಾಕಿ ನಿಷೇಧಕ್ಕೆ ಸರ್ಕಾರದ ಚಿಂತನೆ

Tue, 27 Oct 2009 14:47:00  Office Staff   S.O. News Service
ಬೆಂಗಳೂರು, ಅ.26 : ದೀಪಾವಳಿ ಹಬ್ಬ ಮುಗಿದ ನಂತರ ಪಟಾಕಿ ಅನಾಹುತಗಳ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಹಬ್ಬ ಹಾಗೂ ಸಮಾರಂಭಗಳಲ್ಲಿ ರಾಕೆಟ್, ಬಾಂಬ್, ಹೂಕುಂಡ ಹಾಗೂ ಭಾರಿ ಶಬ್ದ ಮಾಡುವ ಕೆಲ ಪಟಾಕಿಗಳನ್ನು ಸಿಡಿಸುವುದಕ್ಕೆ ಅದು ನಿಷೇಧ ಹೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. 

ನಿಷೇಧ ವಿಧಿಸಲು ಕಾನೂನಿನಲ್ಲಿರುವ ಅವಕಾಶಗಳು ಮತ್ತು ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ನಡೆಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಿದೆ. 
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್, ಗೃಹ ಸಚಿವ ಡಾ|ವಿ.ಎಸ್.ಆಚಾರ್ಯ, ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಹಾಗೂ ವಿವಿಧ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 
ಈ ಬಾರಿ ದೀಪಾವಳಿಯ ವೇಳೆ ರಾಜ್ಯದಲ್ಲಿ ೧೫೦ಕ್ಕೂ ಹೆಚ್ಚು ಮಂದಿ ಪಟಾಕಿ ಕಿಡಿಯಿಂದ ಕಣ್ಣಿನ ತೊಂದರೆಗೆ ಸಿಲುಕಿದ್ದರು.‘ಪ್ರತಿ ದೀಪಾವಳಿಗೆ ಸುಮಾರು ೩೦೦ ಮಂದಿ ಕಣ್ಣು ಕಳೆದುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ ದೀಪಾವಳಿ ಹಬ್ಬಕ್ಕೆ ಒಂದು ತಿಂಗಳ ಮುಂಚೆ ಈ ಬಗ್ಗೆ ಶಾಲಾ- ಕಾಲೇಜುಗಳಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ಕಾನೂನು ಸಚಿವ ಸುರೇಶ್ ಕುಮಾರ್ ತಿಳಿಸಿದರು. 

ಪಟಾಕಿಯಿಂದ ಗಾಯಗೊಳ್ಳುವವರಲ್ಲಿ ಹೆಚ್ಚಿನವರು ೧೦ ವರ್ಷಕ್ಕಿಂತ ಕೆಳಗಿನ ಮಕ್ಕಳು. ಹಾಗಾಗಿ ಈ ಬಗ್ಗೆ ಎಲ್ಲರೂ ಚಿಂತಿಸಬೇಕಾದ ಅಗತ್ಯವಿದೆ ಎಂದರು. 

ಸರ್ಕಾರ ನೇಮಿಸಿರುವ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ, ಪಟಾಕಿಗಳ ನಿಷೇಧದ ಸಾಧಕ- ಬಾಧಕಗಳ ಅಧ್ಯಯನ ನಡೆಸಲಿದೆ. ರಾಜ್ಯದಲ್ಲಿ ಕಾನೂನು ತಿದ್ದುಪಡಿಗೆ ಅವಕಾಶವಿದೆಯೇ ಎನ್ನುವ ಬಗ್ಗೆಯೂ ಸಮಿತಿ ಅಧ್ಯಯನ ನಡೆಸಲಿದೆ. 

ಒಂದು ನಿಗದಿತ ಪ್ರದೇಶದಲ್ಲಿ ಪಟಾಕಿಗಳನ್ನು ಸಿಡಿಸುವುದು ಮತ್ತು ನಾಗರಿಕರು ಅದನ್ನು ಕನ್ನಡಕ ಧರಿಸಿ ನೋಡಲು ಅವಕಾಶ ಮಾಡಿಕೊಡುವ ಸಲಹೆಯನ್ನು ಪರಿಗಣಿಸಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸೌಜನ್ಯ: ಕನ್ನಡಪ್ರಭ 

Share: