ಭಟ್ಕಳ, ಸೆಪ್ಟೆಂಬರ್ 30: ಜಿಲ್ಲಾ ಪಂಚಾಯತ ಅಧ್ಯಕ್ಷರ ಆಯ್ಕೆಯ ಗೊಂದಲದ ಸಂಬಂಧ ನಡೆದ ಜಿಲ್ಲಾ ಪಂಚಾಯತ ಸದಸ್ಯರ ಸಭೆಯಲ್ಲಿ ಹಾಜರಿದ್ದ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದು, ಅದೀಗ ಮುಗಿದ ಅಧ್ಯಾಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತರಾಮ ಹೆಗಡೆ ಹೇಳಿದ್ದಾರೆ.
ಅವರು ಜಿಲ್ಲಾ ಕಾಂಗ್ರೆಸ್ ಸಭೆಯನ್ನು ಮುಂದೂಡಿದ ನಂತರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಹಾಜರಿದ್ದ 13 ಸದಸ್ಯರು ಈ ಕುರಿತು ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸಿಲ್ಲ. ಗೈರು ಹಾಜರಾದವರಲ್ಲಿ 6 ಸದಸ್ಯರು ಹೈಕಮಾಂಡ ನಿರ್ಣಯಕ್ಕೆ ಬದ್ದರಾಗಿರುವುದಾಗಿ ಪತ್ರ ನೀಡಿದ್ದಾರೆ ಎಂದ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ನಡೆದ ಗದ್ದಲದ ಕುರಿತಂತೆ ವಿಡಿಯೋ ಚಿತ್ರಣ ನಡೆಸಿದ್ದು, ದ್ರಶ್ಯಾವಳಿಗಳುಳ್ಳ ಸಿಡಿಯನ್ನು ಹೈಕಮಾಂಡಿಗೆ ಒಪ್ಪಿಸಲಾಗುವುದು. ಸಭೆಯಲ್ಲಿ ಗದ್ದಲ ನಡೆಸಿದ ದೀಪಕ ಹೊನ್ನಾವರ ವಿರುದ್ಧ ಈಗಾಗಲೇ ಪಕ್ಷ ನೋಟಿಸ್ ನೀಡಿದೆ. ಗೋಪಾಲ ಕಾನಡೆಯವರು ತಮ್ಮ ನಡತೆಯಿಂದ ಪಕ್ಷದ ಘನತೆ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಎಲ್ಲವನ್ನು ಪರಿಶೀಲನೆ ನಡೆಸಿ ಹೈಕಮಾಂಡ್ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು. ಅಕ್ಟೋಬರ್ 2ರಿಂದ ಸರಕಾರದ ವೈಫಲ್ಯದ ಕುರಿತಂತೆ ಉಪವಾಸ ಸತ್ಯಾಗ್ರಹ ನಡೆಸುವವರಿದ್ದೇವೆ. 12ರಂದು ವಿವಿಧ ಬ್ಲಾಕ್ ಮಟ್ಟಗಳಿಗೆ ಹೋರಾಟವನ್ನು ಕೊಂಡೊಯ್ಯುವುದಾಗಿ ಅವರು ಇದೇ ಸಂದರ್ಭದಲ್ಲಿ ನುಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಡಿ.ನಾಯ್ಕ ಮಾತನಾಡಿ ಪಕ್ಷದ ನೋಟಿಸ್ ಸ್ವೀಕರಿಸಿದವರು ಲಿಖಿತವಾಗಿ ಉತ್ತರ ನೀಡುವುದನ್ನು ಬಿಟ್ಟು ಬಾಯಿ ಮಾಡುವುದು ತರವಲ್ಲ. ಜಿಲ್ಲೆಯ ಧುರೀಣರೋರ್ವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಪಕ್ಷದ ಕಾರ್ಯಕರ್ತರೆಲ್ಲರೂ ಕೆಪಿಸಿಸಿ ಬಗ್ಗೆ ಗೌರವ ಭಾವ ಹೊಂದುವುದು ಅಗತ್ಯ ಎಂದು ವಿವರಿಸಿದರು. ಮುಖಂಡರುಗಳಾದ ಭಾಗ್ವತ, ರಮಾನಂದ ನಾಯಕ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.