ಭಟ್ಕಳ, ಡಿಸೆಂಬರ್ 17: ಜಿಲ್ಲಾ ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಪರ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿವೇದಿತ ಆಳ್ವಾ ಬುಧವಾರ ಬೆಳಿಗ್ಗೆ ಅಬ್ಬರದ ಪ್ರಚಾರ ನಡೆಸಿದರು.

ತಾಲೂಕಿನ ವಿವಿಧ ಮುಖಂಡರುಗಳ ಮನೆಗೆ ತೆರಳಿ ಮತಯಾಚನೆ ನಡೆಸಿದ ಅವರು, ಜಿಲ್ಲಾಪಂಚಾಯತ ಸದಸ್ಯ ದಾಮೋದರ ಗರ್ಡೀಕರ ಮನೆಯಲ್ಲಿ ನಡೆದ ಮತದಾರರ ಸಭೆಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಸರಕಾರ ಗೊಂದಲದಿಂದ ಕೂಡಿದ್ದು, ಅವಸಾನದ ಅಂಚನ್ನು ತಲುಪಿದೆ. ದೀನ ದಲಿತರ, ಹಿಂದುಳಿದವರ ಪರ ನಿಲ್ಲುವ ಶಕ್ತಿ ಕಾಂಗ್ರೆಸ್ಗೆ ಮಾತ್ರ ಇದೆ ಎಂದರು. ಕಾಂಗ್ರೆಸ್ನಲ್ಲಿ ಯಾವುದೇ ಬಣವಿಲ್ಲ ಎಂದ ಅವರು ಅಭ್ಯರ್ಥಿ ಎಸ್.ಎಲ್.ಘೋಟ್ನೇಕರರನ್ನು ಗೆಲ್ಲಿಸಲು ಎಲ್ಲರೂ ಕೈ ಜೋಡಿಸುವಂತೆ ವಿನಂತಿಸಿಕೊಂಡರು. ಜಿಲ್ಲೆಯಲ್ಲಿ ಓರ್ವರೇ ಕಾಂಗ್ರೆಸ್ ಶಾಸಕರಿದ್ದು, ವಿಧಾನ ಪರಿಷತ್ ಅಭ್ಯರ್ಥಿ ಗೆಲ್ಲುವುದರಿಂದ ಕಾಂಗ್ರೆಸ್ಸಿಗೆ ಬಲ ಬರಲಿದೆ ಎಂಬ ವಿಶ್ವಾಸವನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ ಸದಸ್ಯ ದಾಮೋದರ ಗರ್ಡೀಕರ ಮಾತನಾಡಿ, ಬಿಜೆಪಿ ಸರಕಾರದ ಅವಧಿಯಲ್ಲಿ ಪಂಚಾಯತ ವ್ಯವಸ್ಥೆ ಕಳೆಗುಂದಿದೆ. ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲೂ ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಧುರೀಣ ರಾಮಾ ಮೊಗೇರ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಸಿಸಿ ಸದಸ್ಯ ಮೋಂಟಿ ಫರ್ನಾಂಡೀಸ್, ಸೇವಾ ದಳದ ರಾಜ್ಯ ಸಂಚಾಲಕ ಸಾಯಿ ಗಾಂವಕರ್, ಪ್ರಸನ್ನ ಘೋಟಗೆ, ಭಟ್ಕಳ ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ತಾಲೂಕು ಪಂಚಾಯತ ಸದಸ್ಯರಾದ ವಿಠ್ಠಲ್ ನಾಯ್ಕ, ಜಯಲಕ್ಷ್ಮಿ ಗೊಂಡ, ಮುಂಡಳ್ಳಿ ಗ್ರಾಮಪಂಚಾಯತ ಅಧ್ಯಕ್ಷ ನಾಗಪ್ಪ ನಾಯ್ಕ, ಹಿರಿಯ ಧುರೀಣ ರಾಮಾ ನಾಯ್ಕ, ಜಿಲ್ಲಾಯುವ ಕಾಂಗ್ರೆಸ್ ಮುಖಂಡರಾದ ರಹೀಮ್, ಸಾದೀಕ್ ಮಟ್ಟಾ, ಸಚಿನ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.