ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬೇರೆ ಕೆಲಸಗಳ ಕಡೆ ಗಮನ - ಸದನದ ಕಲಾಪದ ಮಟ್ಟ ಇಳಿಮುಖ - ಕೆ.ಜಿ.ಬೋಪಯ್ಯ ಹತಾಶೆ

ಬೆಂಗಳೂರು: ಬೇರೆ ಕೆಲಸಗಳ ಕಡೆ ಗಮನ - ಸದನದ ಕಲಾಪದ ಮಟ್ಟ ಇಳಿಮುಖ - ಕೆ.ಜಿ.ಬೋಪಯ್ಯ ಹತಾಶೆ

Sat, 20 Feb 2010 23:59:00  Office Staff   S.O. News Service

ಬೆಂಗಳೂರು, ಫೆಬ್ರವರಿ ೨೦:ಶಾಸನ ರಚಿಸುವ ಜವಾಬ್ದಾರಿ ಹೊಂದಿರುವ ಶಾಸನಸಭೆ ಈ ಕೆಲಸಕ್ಕಿಂತ ಬೇರೆ ಕೆಲಸಗಳ ಕಡೆಗೇ ಹೆಚ್ಚಿನ ಗಮನ ನೀಡುವ ಮೂಲಕ ಸದನ ಕಲಾಪದ ಮಟ್ಟ ಇಳಿಮುಖವಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಇಂದಿಲ್ಲಿ ಅಸಹಾ‌ಯಕತೆ ವ್ಯಕ್ತಪಡಿಸಿದ್ದಾರೆ.

 

 

ಇಂದಿಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಅವರು ಈ ಅಸಹಾಯಕತೆ ವ್ಯಕ್ತಪಡಿಸಿದರಲ್ಲದೇ,ಶಾಸನಸಭೆಯ ಮುಖ್ಯ ಕೆಲಸವೇ ಶಾಸನ ರಚಿಸುವುದು.ಆದರೆ ಅದನ್ನು ಬಿಟ್ಟು ಬೇರೆ ಕೆಲಸಗಳೇ ಜಾಸ್ತಿಯಾಗುತ್ತಿವೆ ಎಂದರು.

 

 

ಸಂಸದೀಯ ಸಲಹಾ ಸಮಿತಿಯಲ್ಲಿ ತೀರ್ಮಾನವಾದ ಹಾಗೆ ಸದನ ಕಲಾಪ ನಡೆಯುವುದಿಲ್ಲ ಎಂಬುದನ್ನು ಒಪ್ಪಿಕೊಂಡ ಅವರು,ಈ ಹಿನ್ನೆಲೆಯಲ್ಲಿ ಮತ್ತೊಂದು ಸಲಹಾ ಸಮಿತಿಯನ್ನು ರಚಿಸಿ ಸಲಹೆ ಪಡೆಯುವುದಾಗಿ ಹೇಳಿದರು.

 

 

ಫೆಬ್ರವರಿ ೨೫ ರಂದು ರಾಜ್ಯ ವಿಧಾನ ಮಂಡಲದ ಅಧಿವೇಶನ ನಡೆಯಲಿದ್ದು ಮಾರ್ಚ್ ಇಪ್ಪತ್ತಾರರವರೆಗೆ ನಡೆಯಲಿದೆ.ಈ ಬಾರಿ ಸದನ ಕಲಾಪ ತನ್ನ ಉದ್ದೇಶಗಳಿಗನುಗುಣವಾಗಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

 

ಸದನ ಕಲಾಪದಲ್ಲಿ ಜನರ ಸಮಸ್ಯೆಗಳ ಬಗ್ಗೆ,ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು.ಆ ಮೂಲಕ ಅಂತಹ ಸಮಸ್ಯೆಗಳ ಪರಿಹಾರವಾಗಬೇಕು ಎಂಬುದು ತಮ್ಮ ಬಯಕೆ ಎಂದು ಸ್ಪಷ್ಟ ಪಡಿಸಿದರು.

 

 

ಸದನ ಸಮಿತಿಗೆ ಕಾಲಾವಕಾಶ

 

ರಾಜ್ಯ ವಿಧಾನಸಭೆಯಲ್ಲಿ ನಡೆದ ಶಾಸಕರ ಧಾಂಧಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಸದನ ಸಮಿತಿ ವರದಿ ನೀಡಲು ಮತ್ತಷ್ಟು ಕಾಲಾವಕಾಶ ಕೇಳಿದೆ ಎಂದು ಇದೇ ಸಂಧರ್ಭದಲ್ಲಿ ಹೇಳಿದರು.

 

 

ಶಾಸಕರ ಧಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸದನ ಸಮಿತಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ.ಪ್ರತಿಪಕ್ಷಗಳ ನಾಯಕರ ಅಭಿಪ್ರಾಯವನ್ನು ಪಡೆಯದೇ ಏಕಮುಖ ವರದಿ ನೀಡಲು ಮುಂದಾಗಿದೆ ಎಂಬ ಆರೋಪಗಳನ್ನು ಅವರು ತಳ್ಳಿ ಹಾಕಿದರು.

 

 

ಸದನ ಸಮಿತಿ ತನ್ನ ತನಿಖೆ ಕಾರ್ಯವನ್ನು ಆರಂಭಿಸಿದ ಮೇಲೆ ವಿಧಾನಸಭೆಯ ಎಲ್ಲ ೨೨೪ ಸದಸ್ಯರಿಗೂ ಪತ್ರ ಬರೆದು ಅಭಿಪ್ರಾಯ ತಿಳಿಸಲು ಕೋರಿದೆ.ಹೀಗಾಗಿ ಜೆಡಿ‌ಎಸ್ ನಾಯಕ ರೇವಣ್ಣ ಅವರ ಟೀಕೆ ಏನಿದೆ?ಅದು ಸಮಂಜಸವಲ್ಲ ಎಂದು ನುಡಿದರು.

 

 

ಸದನ ಸಮಿತಿ ರಚಿಸುವಾಗಲೇ ಪ್ರತಿಪಕ್ಷಗಳವರಿಗೆ ಸೂಕ್ತ ಪ್ರಾತಿನಿಧ್ಯ ನೀಡದೇ ತಾರತಮ್ಯ ಧೋರಣೆ ತೋರಿಸಲಾಗಿದೆ ಎಂದು ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು,ವಿಧಾನಸಭಾಧ್ಯಕ್ಷನಾಗಿ ನನ್ನ ವಿವೇಚನೆಯನ್ನು ಬಳಸಿ ನಾನು ಕಾರ್ಯ ನಿರ್ವಹಿಸಿದ್ದೇನೆ.ಹೀಗಾಗಿ ಯಾರೇನೇ ಟೀಕೆ ಮಾಡಿದರೂ ಅದರ ಬಗ್ಗೆ ಪ್ರತಿಕ್ರಿಯಿಸಲಾರೆ

ಎಂದು ನುಡಿದರು.


Share: