ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮ.ಪ್ರ.: ಇವಿಎಂಗಳು, ಚುನಾವಣಾ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್‌ಗೆ ಬೆಂಕಿ

ಮ.ಪ್ರ.: ಇವಿಎಂಗಳು, ಚುನಾವಣಾ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್‌ಗೆ ಬೆಂಕಿ

Fri, 10 May 2024 13:01:21  Office Staff   Vb

ಬೇತುಲ್: ಚುನಾವಣಾ ಸಿಬ್ಬಂದಿ ಮತ್ತು ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳನ್ನು ಸಾಗಿಸುತ್ತಿದ್ದ ಬಸ್‌ಗೆ ಬೆಂಕಿ ಹತ್ತಿಕೊಂಡ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಸಂಭವಿಸಿದ್ದು, ಕೆಲವು ಇವಿಎಂಗಳಿಗೆ ಹಾನಿಯುಂಟಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಬಸ್‌ನಲ್ಲಿ ಕಿಡಿಯುಂಟಾಗಿ ಬೆಂಕಿ ಹತ್ತಿಕೊಂಡಿದ್ದು,ಚುನಾವಣಾ ಸಿಬ್ಬಂದಿ ಮತ್ತು ಬಸ್ ಚಾಲಕ ಗಾಯಗೊಳ್ಳದೆ ಪಾರಾಗಿದ್ದಾರೆ. ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ಗೋಲಾ ಗ್ರಾಮದ ಸಮೀಪ ಈ ಘಟನೆ ನಡೆದಿದೆ ಎಂದು ಬೇತುಲ್ ಜಿಲ್ಲಾಧಿಕಾರಿ ನರೇಂದ್ರ ಸೂರ್ಯವಂಶಿಯವರು ಸುದ್ದಿಸಂಸ್ಥೆಗೆ ತಿಳಿಸಿದರು.

ಘಟನೆ ಸಂಭವಿಸಿದಾಗ ಬಸ್‌ನಲ್ಲಿ ಆರು ಚುನಾವಣಾ ಸಿಬ್ಬಂದಿ ಮತ್ತು ಆರು ಇವಿಎಂಗಳಿದ್ದು, ಬೆಂಕಿಯಿಂದಾಗಿ ನಾಲ್ಕು ಮತಗಟ್ಟೆಗಳ ಇವಿಎಂಗಳಿಗೆ ಹಾನಿಯುಂಟಾಗಿದೆ. ಇತರ ಎರಡು ಇವಿಎಂಗಳು ಸುರಕ್ಷಿತವಾಗಿವೆ. ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದರು. ಈ ಘಟನೆಯಿಂದ ಇವಿಎಂಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆಯ ಮೇಲೆ ಪರಿಣಾಮವಾಗುವುದೇ ಎಂಬ ಪ್ರಶ್ನೆಗೆ ಜಿಲ್ಲಾಧಿಕಾರಿಗಳು, ಈ ಬಗ್ಗೆ ತಾನು ಚುನಾವಣಾ ಆಯೋಗಕ್ಕೆ ವರದಿಯನ್ನು ಸಲ್ಲಿಸಲಿದ್ದು, ಸಂಬಂಧಿತ ಮತಗಟ್ಟೆಗಳಲ್ಲಿ ಮರುಮತದಾನದ ಬಗ್ಗೆ ಅದು ನಿರ್ಧರಿಸುತ್ತದೆ ಎಂದು ಉತ್ತರಿಸಿದರು.

ಬೇತುಲ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.72.65ರಷ್ಟು ಮತದಾನವಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.


Share: