ಬೆಂಗಳೂರು, ಎ.11: ಬಿಬಿಎಂಪಿ ಚುನಾವಣೆ ನಡೆಸಿದ ಬೆನ್ನಲ್ಲಿಯೇ ರಾಜ್ಯ ಚುನಾವಣಾ ಆಯೋಗವು 5563 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಬಹುತೇಕ ಎ.12ರಂದು ಚುನಾವಣಾ ಆಯುಕ್ತ ಸಿ.ಆರ್.ಚಿಕ್ಕಮಠ್ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ.
ಗ್ರಾಮ ಪಂಚಾಯತ್ಗಳಿಗೆ ಇದೇ ಪ್ರಥಮ ಬಾರಿಗೆ ಎರಡು ಹಂತಗಳಲ್ಲಿ (ಮೇ 9 ಮತ್ತು 13) ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದ್ದು, ಫಲಿತಾಂಶವು ಮೇ 16ರಂದು ಸಂಜೆ ಹೊರಬೀಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಮೊದಲ ಹಂತದಲ್ಲಿ (ಮೇ 9) ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡನೇ ಹಂತದಲ್ಲಿ (ಮೇ 13) ಗುಲ್ಬರ್ಗ, ಬೀದರ್, ಯಾದಗಿರಿ, ಬಿಜಾಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ದಕ್ಷಿಣ ಕನ್ನಡ, ಕಾರವಾರ, ಉಡುಪಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಯಲಿದೆ.
ರಾಜ್ಯದ 5563 ಗ್ರಾಮ ಪಂಚಾಯತ್ಗಳ ಪೈಕಿ 150 ಗ್ರಾಮಪಂಚಾಯತ್ಗಳ ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇವುಗಳ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯಿದ್ದು, ಉಳಿದ 5413 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿದು ಬಂದಿದೆ.