ಚಿಕ್ಕಬಳ್ಳಾಪುರ, ಡಿ.8 : ಜಿಲ್ಲೆಯ ಸಮೀಪದಲ್ಲಿ ಕಾರ್ಖಾನೆ ಪ್ರಾರಂಭಿಸಿರುವುದರಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಹಾಗೂ ಇತರೆ ಕಡೆಗಳ ಸುಮಾರು ೪ ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ನಸೀರ್ ಅಹ್ಮದ್ ತಿಳಿಸಿದರು.
ಇಂದು ಪತ್ರಕರ್ತರನ್ನು ತಮ್ಮ ಕಾರ್ಖಾನೆಗಳಿಗೆ ಕರೆದೋಯ್ದು ಎಲ್ಲಾ ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿ ವಿರೋಧ ಪಕ್ಷದವರು ತಮ್ಮ ಮೇಲೆ ಮಾಡಿರುವ ಆಪಾದನೆಗಳನ್ನು ಖಂಡಿಸುತ್ತಾ, ನಾನು ರಾಜ್ಯದ ಸಣ್ಣ ಕೈಗಾರಿಕಾ ಸಚಿವರಾಗಿದ್ದ ಕಾಲದಿಂದ ಇಂದಿನ ವರೆಗೂ ಕೇವಲ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಸಿಕೊಡುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿರುವುದಾಗಿ ಅವರು ತಿಳಿಸಿದರು.
ಕಳೆದ 5 ವರ್ಷಗಳಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್, ಬಂಗಾರಪೇಟೆ, ಕೋಲಾರ, ಮುಳಬಾಗಿಲುಗಳಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಲಾಗಿದ್ದು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಸಮೀಪದಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸುವ ಹಂತದಲ್ಲಿದ್ದು ಇದರಿಂದ ಎರಡೂ ಜಿಲ್ಲೆಗಳ ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಂದುವರೆದ ಅವರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಅಭಿವೃದ್ದಿ ಬಗ್ಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಈ ಎಲ್ಲಾ ಯೋಜನೆಗಳು ಈಗ ತಿಳಿಸದೆ ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಿ ಸಾರ್ವಜನಿಕರಿಗೆ ತಿಳಿಯಪಡಿಸಲಾಗುವುದು ನಮ್ಮ ಉದ್ದೇಶ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳು, ಕೃಷಿ ಕಾರ್ಮಿಕರು, ಮಹಿಳೆಯರು ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಾನು ಶ್ರಮವಹಿಸುತ್ತಿದ್ದೇನೆ ಎಂದರು.
ವಿರೋಧ ಪಕ್ಷದವರು ಮಾಡಿರುವ ಟೀಕೆಗಳು ಕೇವಲ ರಾಜಕೀಯ ಲಾಭಕ್ಕೋಸ್ಕರ ಆಗಿದ್ದು. ಇದರಿಂದ ಯಾರೂ ಸಹ ವಿಚಲಿತರಾಗದೇ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬೇಕೆಂದು ಮನವಿ ಮಾಡುತ್ತಾ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೇಸ್ ಮ್ತತು ಜಾತ್ಯಾತೀತ ಜನತಾದಳ ಸಂಯುಕ್ತ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ನನಗೆ ಎರಡು ಜಿಲ್ಲೆಗಳ 5,450 ಮತದಾರರು ಪಕ್ಷಾತೀತವಾಗಿ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಮತ್ತು ಇತರೆ ಕಡೆಗಳಲ್ಲಿ ತಮ್ಮ ಸಮೂಹದ ಒಟ್ಟು 42 ಕಾರ್ಖಾನೆಗಳು ಚಾಲನೆಯಲ್ಲಿದ್ದು, ಇದರಲ್ಲಿ ಸುಮಾರು 40 ರಿಂದ 45 ಸಾವಿರ ಜನರಿಗೆ ಉದ್ಯೋಗಳನ್ನು ನೀಡಲಾಗಿದೆ. ಈ ಎಲ್ಲಾ ನೌಕರರಿಗೆ ಸರಕಾರ ನೀಡಿದಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.