ಬೆಂಗಳೂರು, ಜನವರಿ 13: ಅಕ್ರಮ - ಸಕ್ರಮ ಯೋಜನೆ ಕಾನೂನು ಬಾಹಿರ ಎಂದಿರುವ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ನಗರ ಯೋಜನೆ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಬಾರದು ಎಂದು ಹೇಳಿದ್ದಾರೆ.
ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆ ಹಾಗೂ ಕಟ್ಟಡಗಳನ್ನು ಸಕ್ರಮಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರ ಯೋಜನಾ ಕಾಯ್ದೆಯನ್ನು ಉಲ್ಲಂಘಿಸಿ, ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿರುವುದನ್ನು ಯಾವುದೇ ಕಾರಣಕ್ಕೂ ಸಕ್ರಮ ಮಾಡಬಾರದು, ಎಂದು ವೇಳೆ ಮಾಡಿದರೆ ಕಾನೂನಿಗೆ ವಿರುದ್ಧವಾದುದು ಎಂದು ಹೇಳಿದರು.
ನಗರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾಗದಂತೆ ಕಾನೂನಿಗೆ ತಿದ್ದುಪಡಿ ತಂದು ನೀತಿ, ನಿಯಮ ರೂಪಿಸಿ ಎಂದ ಅವರು ಈಗ ಕಾನೂನು ಉಲ್ಲಂಘಿಸಿ, ಅಕ್ರಮವಾಗಿ ಕಟ್ಟಿಕೊಂಡಿರುವ ಮನೆ, ನವೇಶನಗಳನ್ನು ಸಕ್ರಮ ಮಾಡುವುದು ಸರಿಯಲ್ಲ ಎಂದರು.
ಸಚಿವರ ಮೇಲೆ ಯಾವಾಗ ದಾಳಿ ಮಾತುತ್ತೀರಾ ಎನ್ನುವ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಷ್ಟ ಪುರಾವೆ ಮಾಹಿತಿ ಸಿಕ್ಕರೆ ಸಚಿವರ ಮೇಲೆ ದಾಳಿ ಮಾಡಲು ಹಿಂಜರಿಯುವುದಿಲ್ಲ ಎಂದು ಘೋಷಿಸಿದರು.
ರಾಜಕಾರಣಿಗಳು ಸರ್ಕಾರಿ ನೌಕರರು ಭ್ರಷ್ಟಾಚಾರದಲ್ಲಿ ಸಯಾಮಿ ಅವಳಿಗಳಿದ್ದಂತೆ, ಒಬ್ಬರನ್ನು ಬಿಟ್ಟು ಒಬ್ಬರು ಇರುವುದಿಲ್ಲ. ಭ್ರಷ್ಟಾಚಾರ ಸಮಾಜದಲ್ಲಿ ಪಿಡುಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದಾಗ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಅನುಮತಿಬೇಕಾಗುತ್ತಿದೆ. ಆದರೆ, ಲೋಕೋಪಯೋಗಿ ಇಲಾಖೆಯಲ್ಲಿ ಯಾವುದೇ ಅನುಮತಿ ನೀಡುವುದಿಲ್ಲ. ಪ್ರಕರಣಗಳಲ್ಲಿ ಭಾಗಿಯಾಗಿ ಅಮಾನತುಗೊಂಡ ಇಂಜಿನಿಯರ್‌ಗಳಿಗೆ ಬಡ್ತಿ ನೀಡುವುದು ಹಾಗೂ ಅವರ ಅಮಾನತು ರದ್ದು ಮಾಡುವ ಸರ್ಕಾರದ ಕ್ರಮ ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಭ್ರಷ್ಟಾಚಾರಿಗಳು ಯಾರು ಎಂದು ಹುಡುಕಬೇಕಾಗಿತ್ತು. ಆದರೆ, ಇಂದು ಪ್ರಾಮಾಣಿಕರು ಯಾರು ಎಂದು ಹುಡುಕಬೇಕಾಗಿದೆ. ಇದುವರೆವಿಗೂ ಮೂರು ಅಧಿಕಾರಿಗಳು ಮಾತ್ರ ಆಸ್ತಿ ವಿವರ ಸಲ್ಲಿಸಿದ್ದಾರೆ. ಉಳಿದ ಅಧಿಕಾರಿಗಳಾರೂ ವಿವರ ಸಲ್ಲಿಸಿಲ್ಲ ಎಂದು ಹೇಳಿದ ಅವರು, ಮಕ್ಕಳು, ಪೋಷಕರ ಆದಾಯವನ್ನರಿತು ತೃಪ್ತಿಪಡಿ ಎಂದು ಸಲಹೆ ಮಾಡಿದರು.