ಬೆಂಗಳೂರು,ಜನವರಿ ೧೩: ಮಾಜೀ ಪ್ರಧಾನಿ ದೇವೇಗೌಡರು ತಮ್ಮ ನಡವಳಿಕೆಯ ಮೂಲಕ ಮಾಡಿದ ತಪ್ಪಿಗಿಂತ ದೊಡ್ಡ ತಪ್ಪನ್ನು ರೈತರ ವಿಷಯದಲ್ಲಿ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ಕ್ಷಮೆ ಕೋರಬೇಕು ಎಂದು ಕೆಪಿಸಿಸಿ ಮಾಜೀ ಅಧ್ಯಕ್ಷ ಬಿ.ಜನಾರ್ಧನ ಪೂಜಾರಿ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಪಕ್ಷದ ಕಛೇರಿಯಲ್ಲಿಂದು ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,ಅಧಿಕಾರಕ್ಕೆ ಬಂದ ಇಪ್ಪತ್ತು ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ ರೈತರ ವಿಷಯದಲ್ಲಿ ದೊಡ್ಡ ತಪ್ಪು ಮಾಡಿದೆ ಎಂದು ಕಿಡಿ ಕಾರಿದರು.
ರೈತರು ನ್ಯಾಯ ಕೇಳಲು ಹೋದರೆ ಗೋಲಿಬಾರ್ ನಡೆಯುತ್ತದೆ,ಲಾಠಿ ಚಾರ್ಜ್ ನಡೆಯುತ್ತದೆ.ನೈಸ್ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರು ಪ್ರತಿಭಟನೆ ನಡೆಸಿದರೆ ಅವರೆಲ್ಲ ಬಾಡಿಗೆ ರೈತರು ಎಂಬ ಮಾತು ಮುಖ್ಯಮಂತ್ರಿಗಳ ಬಾಯಿಂದ ಹೊರಬೀಳುತ್ತದೆ.
ಇವತ್ತು ರೈತರ ಕೈಗೆ ಬೆಳೆ ಹತ್ತುತ್ತಿಲ್ಲ.ಬೆಲೆ ಸಿಗುತ್ತಿಲ್ಲ,ಕಣ್ಣೀರು ಹಾಕುವುದೇ ಅವರ ನಿತ್ಯದ ಕತೆಯಾಗಿದೆ.ಇಂತಹ ಸಂಧರ್ಭದಲ್ಲಿ ತಮಗಾದ ಅನ್ಯಾಯದ ಬಗ್ಗೆ ಪ್ರತಿಭಟನೆ ಮಾಡಿದರೆ ಅವರೆಲ್ಲ ಬಾಡಿಗೆ ರೈತರು ಎಂದು ಯಡಿಯೂರಪ್ಪ ಹೇಳುತ್ತಾರಲ್ಲ?ಇದು ನ್ಯಾಯವಾ?ಎಂದು ಜನಾರ್ಧನ ಪೂಜಾರಿ ಪ್ರಶ್ನೆ ಮಾಡಿದರು.
ಇನ್ನು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ರೈತರು ನೂರಾ ಮೂವತ್ತೈದು ದಿನಗಳ ಕಾಲ ಧರಣಿ ನಡೆಸಿದರೆ ಅವರ ಕಷ್ಟವೇನು ಅಂತ ಕೇಳುವ ಸೌಜನ್ಯವೂ ಇವರಿಗಿಲ್ಲ.ಈ ಎಲ್ಲ ತಪ್ಪುಗಳಿಗಾಗಿ ಯಡಿಯೂರಪ್ಪ ಮೊದಲು ರೈತರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಮಾಜೀ ಪ್ರಧಾನಿ ದೇವೇಗೌಡರು ರಾಜ್ಯದ ಐದೂವರೆ ಕೋಟಿ ಜನರ ಪಾಲಿನ ಮುಖ್ಯಮಂತ್ರಿಯನ್ನು ಟೀಕೆ ಮಾಡಿದ್ದು ಸರಿಯಲ್ಲ.ಅವರಂತಹ ಹಿರಿಯ ರಾಜಕಾರಣಿಯಿಂದ ನಾವು ಇದನ್ನು ನಿರೀಕ್ಷಿಸುವುದಿಲ್ಲ.ಅದೇ ರೀತಿ ತಾವು ಮಾಡಿದ ಟೀಕೆಗೆ ಅವರು ತಕ್ಷಣವೇ ಕ್ಷಮೆ ಕೋರಬೇಕಿತ್ತು.
ಹಾಗೆ ಕ್ಷಮೆ ಕೋರಿದ್ದರೆ ಅವರು ದೊಡ್ಡವರಾಗುತ್ತಿದ್ದರು ಎಂದು ಹೇಳಿದ ಜನಾರ್ಧನ ಪೂಜಾರಿ,ಇಷ್ಟೆಲ್ಲದರ ನಡುವೆಯೂ ತಾವು ಪ್ರಧಾನಿಯಾಗಿದ್ದವರು ಎಂಬ ಹಮ್ಮಿಲ್ಲದೇ ರೈತರ ಪರವಾಗಿ ಬೀದಿಗಿಳಿದಿದ್ದಾರಲ್ಲ?ಅದರ ಬಗ್ಗೆ ತಮಗೆ ಗೌರವವಿದೆ ಎಂದು ಹೇಳಿದರು.
ಅಂದ ಹಾಗೆ ದೇವೇಗೌಡರು ಟೀಕೆ ಮಾಡಿದರು ಎಂದು ಬಿಜೆಪಿಯ ಕಾರ್ಯಕರ್ತರು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಾ,ಅವರೇನು ಬೈದರು ಎಂಬುದನ್ನು ಹೇಳುತ್ತಾ ಯಡಿಯೂರಪ್ಪ ಅವರ ಹೆಸರಿಗೇ ಮಸಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.ನನ್ನ ಪ್ರಕಾರ ಅವರ ಪಕ್ಷದಲ್ಲೇ ಅವರ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಇದೇ ರೀತಿ ದೇವೇಗೌಡರು ಟೀಕೆ ಮಾಡಿದರು ಎಂದು ಇಷ್ಟೆಲ್ಲ ಹೇಳುತ್ತಿರುವ ಯಡಿಯೂರಪ್ಪ,ಈ ಹಿಂದೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಕರುಣಾಕರ ರೆಡ್ಡಿಯವರೇ ತಮ್ಮನ್ನು ರಾಕ್ಷಸ ಕಂಸನಿಗೆ ಹೋಲಿಸಿದಾಗ ಯಾಕೆ ಸುಮ್ಮನಿದ್ದರು?
ಅದೇ ರೀತಿ ಇವರೇ ತಮ್ಮ ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳನ್ನು ಉಗ್ರಗಾಮಿಗಳು ಎಂದು ಕರೆದಿರಲಿಲ್ಲವೇ?ಎಂದು ಪ್ರಶ್ನಿಸಿದ ಜನಾರ್ಧನ ಪೂಜಾರಿ,ನೈಸ್ ಯೋಜನೆಯನ್ನು ಮೂಲ ಒಪ್ಪಂದಕ್ಕೆ ಪೂರಕವಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.
ಮೂಲ ಒಪ್ಪಂದದಲ್ಲಿ ಯಾವ ಭೂಮಿಯನ್ನು ಯೋಜನೆಗಾಗಿ ವಶಪಡಿಸಿಕೊಳ್ಳುವುದಾಗಿ ಹೇಳಲಾಗಿತ್ತು?ಎಂಬ ವಿವರ ಸರ್ಕಾರದ ಬಳಿ ಇದ್ದೇ ಇದೆಯಲ್ಲ?ಹೀಗಾಗಿ ಅದರ ವಿವರವನ್ನು ರೈತರ ಬಳಿಗೆ ತೆಗೆದುಕೊಂಡು ಹೋಗಲಿ,ಮೂಲ ಒಪ್ಪಂದದಲ್ಲಿ ಆ ಭೂಮಿಯನ್ನು ವಶಪಡಿಸಿಕೊಳ್ಳುವ ಮಾತಿದ್ದರೆ ಅವರಿಗೆ ಹೇಳಿ ವಶಪಡಿಸಿಕೊಳ್ಳಲಿ.ಇಲ್ಲದೇ ಹೋದರೆ ಅಂತಹ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡಲಿ ಎಂದು ಹೇಳಿದರು.
ನೈಸ್ ಮಾಲೀಕ ಏನೂ ದೊಡ್ಡ ಮನುಷ್ಯ ಅಲ್ಲ ಎಂದು ಮಾರ್ಮಿಕವಾಗಿ ನುಡಿದ ಅವರು,ಇಡೀ ಯೋಜನೆಗೆ ಸಂಬಂಧಿಸಿದಂತೆ ನಾವು ದೇವೇಗೌಡರ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂಬುದಕ್ಕಿಂತ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವ ಮುನ್ನ ಬಡವರಿಗೆ ಎರಡು ರೂಪಾಯಿಗೆ ಅಕ್ಕಿ ಕೊಡುತ್ತೇವೆ ಎಂದಿದ್ದರು.ನಿರುದ್ಯೋಗಿಗಳೆಲ್ಲರಿಗೆ ಭತ್ಯೆ ಕೊಡುತ್ತೇವೆ ಎಂದು ಹೇಳಿದ್ದರು.ಕೊಟ್ಟ ಮಾತಿಗೆ ಅವರು ತಪ್ಪಿ ನಡೆದ ಬಗ್ಗೆ ಹೇಳಿದರೆ ಅದೇ ದೊಡ್ಡ ಕತೆ ಎಂದೂ ಇದೇ ಸಂಧರ್ಭದಲ್ಲಿ ಹೇಳಿದರು.